----ಕನ್ನಡಪ್ರಭ ವಾರ್ತೆ ಮೈಸೂರು
ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಮಹಾನುಭವರ ಸಂದೇಶಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ರೇಣುಕಾಚಾರ್ಯ ಜಯಂತಿ, ಯೋಗಿನಾರೇಯಣ ಯತಿಂದ್ರರ ಜಯಂತಿ ಹಾಗೂ ಅಗ್ನಿ ಬನ್ನಿರಾಯ ಜಯಂತಿ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾ.12ರ ಸಂಜೆ 4ಕ್ಕೆ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಕಲಾ ಮಂದಿರದಲ್ಲಿ, ಮಾ.14ರ ಬೆಳಗ್ಗೆ 11.30ಕ್ಕೆ ಶ್ರೀ ಯೋಗಿನಾರೇಯಣ ಯತಿಂದ್ರರ ಜಯಂತಿಯನ್ನು ಕಿರು ರಂಗಮಂದಿರದಲ್ಲಿ ಹಾಗೂ ಮಾ.28ರ ಮಧ್ಯಾಹ್ನ 12ಕ್ಕೆ ಅಗ್ನಿ ಬನ್ನಿರಾಯ ಜಯಂತಿಯನ್ನು ಕಿರು ರಂಗಮಂದಿರದಲ್ಲಿ ಆಚರಿಸಲಾಗುವುದು ಎಂದು ಅವರು ಹೇಳಿದರು.ಜಯಂತಿಗಳ ಆಚರಣೆಗೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಸಮುದಾಯದವರು ಸೇರಿ ಜಯಂತಿಗಳ ಆಚರಿಸಬೇಕು. ಆ ಮೂಲಕ ಮಹನೀಯರ ಆದರ್ಶಗಳನ್ನು ಪಾಲಿಸಬೇಕು ಎಂದರು.ಜಯಂತಿಗಳು ನಡೆಯುವ ಸ್ಥಳದ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ ಹಾಗೂ ಊಟದ ಜಾಗಕ್ಕೆ ಶಾಮಿಯಾನ ವ್ಯವಸ್ಥೆಯನ್ನು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಮಾಡಬೇಕು. ಸಮುದಾಯದ ಮುಖಂಡರು ತಮ್ಮ ತಮ್ಮ ಸಮುದಾಯದ ಬಡವರಿಗೆ ಸಹಾಯ ಮಾಡಬೇಕು. ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ತಮ್ಮ ತಮ್ಮ ಜಯಂತಿಗಳ ಆಚರಣೆಯ ದಿವ್ಯ ಸಾನ್ನಿಧ್ಯಕ್ಕೆ ತಮ್ಮ ಸಮುದಾಯದ ಸ್ವಾಮೀಜಿಗಳ ಹೆಸರನ್ನು ಆಯ್ಕೆ ಮಾಡಿ, ಒಂದೆರಡು ದಿನಗಳಲ್ಲಿ ನೀಡಲಾಗುವುದು. ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಹೆಸರನ್ನು ನೀಡಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಮುದಾಯಗಳ ಮುಖಂಡರು ಇದ್ದರು.