ಶಿರಸಿ: ನಗರಕ್ಕೆ ಕೆಂಗ್ರೆ ಹೊಳೆಯಿಂದ ನೀರು ಪೂರೈಕೆ ಮಾಡುತ್ತಿದ್ದ ಬೀಡು ಕಬ್ಬಿಣದ ಹಳೆ ಪೈಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ, ನಗರಸಭೆಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಗುದ್ದಾಟ ನಡೆಯುತ್ತಿದೆ. ಕಳ್ಳತನ ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಪೊಲೀಸ್ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಕೆಂಗ್ರೆ ಘಟಕದಿಂದ ಶಿರಸಿ ನಗರಕ್ಕೆ ನೀರು ಪೂರೈಕೆ ಮಾಡಲು ಕಳೆದ ವರ್ಷ ಹೊಸದಾಗಿ ಪೈಪ್ ಅಳವಡಿಸಲಾಗಿದೆ. ಅದರ ಪಕ್ಕವೇ ಇದ್ದ ಸುಮಾರು ₹೫೦ರಿಂದ ₹೬೦ ಲಕ್ಷ ಮೌಲ್ಯದ ಬೀಡು ಪೈಪ್ ಹಾಗೆಯೇ ಬಿಡಲಾಗಿತ್ತು. ಒಂದು ವಾರದ ಹಿಂದೆ ಹೊರ ಜಿಲ್ಲೆಯರೊಬ್ಬರು ಸುಮಾರು ೭೨೦ ಮೀಟರ್ ಜಾಗದಲ್ಲಿದ್ದ ಸುಮಾರು ₹೬೦ರಿಂದ ₹೭೦ ಲಕ್ಷ ಮೌಲ್ಯದ ಸುಮಾರು ೧೨೦ ಬೀಡು ಹಾಗೂ ಕಬ್ಬಿಣ ಮಿಶ್ರಣದ ಪೈಪ್‌ನ್ನು ಕಳ್ಳತನ ಮಾಡಿ, ಪೈಪ್‌ನ್ನು ಸ್ಥಳದಿಂದ ಸಾಗಿಸಿದ್ದಾರೆ. ಈ ಘಟನೆಯ ಕುರಿತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ, ನಗರಸಭೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಅದು ಟೆಂಡರ್ ಆಗಿದೆ. ಆ ಕಾರಣ ಪೈಪ್ ತೆಗೆಯಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು ನಗರಸಭೆಯ ಅಧ್ಯಕ್ಷರನ್ನು ಭೇಟಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಮೊತ್ತದ ಹಣ ಲೂಟಿಯಾಗುತ್ತಿದ್ದರೂ ಕ್ರಮ ಕೈಗೊಳ್ಳದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಈ ಕುರಿತು ಮಾತನಾಡಿ, ಈ ಪ್ರಕರಣದಲ್ಲಿ ನಗರಸಭೆಯ ಸದಸ್ಯರು ಶಾಮೀಲು ಇದ್ದಾರೆ ಎನ್ನುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಜತೆಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಸದಸ್ಯರಾದ ಮಧುಕರ ಬಿಲ್ಲವ, ದಯಾನಂದ ನಾಯ್ಕ, ಗೀತಾ ಶೆಟ್ಟಿ, ಶೈಲೇಶ ಗಾಂಧಿ ಜೋಗಳೇಕರ ಮತ್ತಿತರರು ಪೈಪ್ ಕಳ್ಳತನ ಮಾಡಿದ ಮತ್ತು ಅದರ ಹಿಂದಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಪ್ರತಿಕ್ರಿಯಿಸಿ, ಪೈಪ್ ತೆಗೆಯುವ ಕುರಿತು ಅಧಿಕಾರಿಗಳು ನನ್ನ ಗಮನಕ್ಕೆ ತಂದಿಲ್ಲ. ಠಾಣೆಯಲ್ಲಿ ದೂರು ಸಲ್ಲಿಸಲು ಪೌರಾಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಪೈಪ್ ನಾಪತ್ತೆ ಪ್ರಕರಣದಲ್ಲಿ ನಗರಸಭೆಯ ಕೆಲವು ಸದಸ್ಯರ ಕೈವಾಡವೂ ಇದೆ. ಇದರ ಸುತ್ತ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಯಲಿದೆ ಎಂದು ಕೆಲ ಸದಸ್ಯರಿಂದ ಒತ್ತಾಯ ಕೇಳಿ ಬಂದಿದೆ.ಪೈಪ್‌ಲೈನ್ ಕಿತ್ತು ಸಾಗಿಸುತ್ತಿರುವ ಕುರಿತು ಸಾರ್ವಜನಿಕರು ಪ್ರಶ್ನಿಸಿದಾಗ, ಇದರ ಕುರಿತು ಮಾಹಿತಿ ಇಲ್ಲ ಎನ್ನುತ್ತಲೇ ನಗರಸಭೆಯ ಅಧ್ಯಕ್ಷರು ಒಂದು ವಾರ ಕಳೆದಿದ್ದಾರೆ. ಈಗ ಸದಸ್ಯರೆಲ್ಲರ ಮೇಲೂ ಆರೋಪ ಕೇಳಿಬರುತ್ತಿದ್ದಂತೆ ಕೆಲವು ಸದಸ್ಯರು ನಗರಸಭೆಗೆ ತೆರಳಿ ಪ್ರಶ್ನಿಸಿದಾಗ ಶನಿವಾರ ಈ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ ಎಂದಿದ್ದಾರೆ. ನಗರಸಭೆ ಆಸ್ತಿ ಹಗಲು ದರೋಡೆಯಾಗುತ್ತಿದ್ದರೂ ನಗರಸಭೆ ಅಧ್ಯಕ್ಷರು ಏಕೆ ಇಷ್ಟು ದಿನ ಮೌನ ವಹಿಸಿದ್ದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.