ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ದಸರಾ ಅಂಗವಾಗಿ ಶನಿವಾರದಿಂದ ಆರಂಭಗೊಳ್ಳಲಿರುವ ದಸರಾ ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನ ಹಾಗೂ ಫಲಪುಷ್ಟ ಪ್ರದರ್ಶನದ ಸಿದ್ಧತೆಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಬಾರಿಯ ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನದಲ್ಲಿ ಪ್ರತಿಷ್ಠಿತ ಹೆಚ್‌ಎಎಲ್ ವತಿಯಿಂದ ಹೆಲಿಕಾಪ್ಟರ್, ಇಸ್ರೋ, ಬಿಇಎಂಎಲ್, ಲಲಿತ ಕಲಾ ಅಕಾಡೆಮಿ, ಚಿತ್ರಕಲಾ ಪರಿಷತ್, ಟಿಟಿಎಲ್, ಕೆಎಂಎಫ್ ಸಹಯೋಗದಲ್ಲಿ ವಿವಿಧ ಕಲಾ ಪ್ರದರ್ಶನ, ಪುಸ್ತಕ ಭಂಡಾರ, ವಿಂಟೇಜ್ ಕಾರುಗಳ ಪ್ರದರ್ಶನದ ಜೊತೆಗೆ ವನ್ಯ ಜೀವಿ ಛಾಯಾಗ್ರಹಣ, ಪಾರಂಪರಿಕ, ಕೃಷಿ ಸಾಧನೆಗಳು, ಆಕರ್ಷಕ ನವರಾತ್ರಿ ಗೊಂಬೆಗಳ ಪ್ರದರ್ಶನ, ಪತಂಗಗಳ ಬಣ್ಣದ ಲೋಕ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಸಮಗ್ರ ಶಾಲೆ, ಜಲ್ ಜೀವನ್ ಮಿಷನ್ ಗ್ರಾಮೀಣ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸೇರಿದಂತೆ ಇತರೆ ಇಲಾಖೆಗಳ ಅತ್ಯಾಕರ್ಷಕ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಪ್ರದರ್ಶನವನ್ನು ಸಾರ್ವಜನಿಕ ವೀಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.ನಂತರ ಪತ್ರಿಕಾ ಹೇಳಿಕೆ ನೀಡಿದ ಅವರು ಫಲಪುಷ್ಪ ಪ್ರದರ್ಶನದಲ್ಲಿ ಈ ವರ್ಷ ಗೃಹ ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರಸಿದ್ಧ ಅರಳುಗುಪ್ಪೆ ದೇವಾಲಯ, ಲೇಪಾಕ್ಷಿ ಶಿವಲಿಂಗ, ವಿಧಾನಸೌಧ ಇತ್ಯಾದಿ ಪುಷ್ಪ ಕಲಾಕೃತಿಗಳ ಮರುಸೃಷ್ಟಿ ಮಾಡಲಾಗುತ್ತಿದೆ. ಬೆಂಗಳೂರಿನ ಲಾಲ್‌ಬಾಗ್‌ನಿಂದ ತಜ್ಞರು ಹಾಗೂ ವಿಶಿಷ್ಟ ಹೂವುಗಳನ್ನು ತರಿಸಿ, ವಿಶೇಷ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಈ ಎಲ್ಲಾ ಸುಂದರ ಕಲಾಕೃತಿಗಳನ್ನು ನೋಡುವಂತಹ ಅವಕಾಶಗಳನ್ನು ಯಾರೂ ಸಹ ಕಳೆದುಕೊಳ್ಳಬಾರದು ಎಂದು ಪ್ರಭು ಜಿ. ತಿಳಿಸಿದರು.ಆಹಾರ, ಮಹಿಳಾ ಕೌಶಲ್ಯ ಮೇಳ: ದಸರಾ ಅಂಗವಾಗಿ ಎನ್‌ಆರ್‌ಎಲ್‌ಎಂ ಸಂಜೀವಿನಿ ವತಿಯಿಂದ ಜಿಲ್ಲೆಯ ಎಲ್ಲಾ ಮಹಿಳಾ ಸ್ವಸಹಾಯ ಗುಂಪುಗಳಿಂದ ಆಹಾರ ಮೇಳ ಹಾಗೂ ತುಮಕೂರು ದಸರಾ ಮಹಿಳಾ ಕೌಶಲ್ಯ ಮೇಳವನ್ನು ಆಯೋಜಿಸಲಾಗಿದೆ. ತುಮಕೂರು ದಸರಾ ಹಿಂದೆಂದಿಗಿಂತಲೂ ವಿಶೇಷ ಹಾಗೂ ಆಕರ್ಷಕವಾಗಿರಲಿದ್ದು, ಜಿಲ್ಲೆಯ ಜನತೆ ತಪ್ಪದೇ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತುಮಕೂರು ದಸರಾ ವೀಕ್ಷಣೆಗೆಂದು ಜಿಲ್ಲೆಯ 3 ಲಕ್ಷ ಶಾಲಾ ಮಕ್ಕಳ ಮೂಲಕ ಪ್ರತಿ ಪೋಷಕರಿಗೆ ತುಮಕೂರು ದಸರಾ ಕಾರ್ಯಕ್ರಮದ ಆಹ್ವಾನ ಪತ್ರ ತಲುಪಿಸಲಾಗಿದೆ. ಆಹ್ವಾನ ಪತ್ರದಲ್ಲಿ ಪ್ರತಿದಿನದ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ನೀಡಲಾಗಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸಿ ಕಲೆಯ ಜೊತೆ ಜೊತೆಗೆ ಜ್ಞಾನವನ್ನು ಮಕ್ಕಳು ವೃದ್ಧಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಪೋಷಕರು ಹಾಗೂ ನಾಗರಿಕರು ಈ ಬಾರಿಯ ತುಮಕೂರು ದಸರಾ ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನ ಹಾಗೂ ಆಕರ್ಷಕ ಫಲಪುಷ್ಪ ಪ್ರದರ್ಶನವನ್ನು ತಪ್ಪದೇ ವೀಕ್ಷಿಸುವಂತೆ ಅವರು ಮನವಿ ಮಾಡಿದರು.