ಕನ್ನಡಪ್ರಭ ವಾರ್ತೆ, ತುಮಕೂರು ಭಾರತೀಯ ಜನಸಂಘದ ಮೂಲಕ ದೇಶದಲ್ಲಿ ಜಾಗೃತಿ ಮೂಡಿಸಿ ದೇಶವನ್ನು ಸದೃಢವಾಗಿ ಕಟ್ಟಲು ಶ್ರಮಿಸಿದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ರವರ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರ ಶಾಸಕ ಜ್ಯೋತಿಗಣೇಶ್ ಕರೆ ನೀಡಿದರು.ನಗರದ 18 ನೇ ವಾರ್ಡ್ ವ್ಯಾಪ್ತಿಯ ಬನಶಂಕರಿ ಮಹಾಶಕ್ತಿ ಕೇಂದ್ರದಲ್ಲಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ರವರ 109ನೇ ಜನ್ಮಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ತಾಯಿ ಹೆಸರಲ್ಲಿ ಮನೆ ಮನೆ ಮುಂದೆ ಗಿಡ ನೆಡುವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಿದಾಗ ಮಾತ್ರ ದೇಶ ಉಳಿಯಲು ಸಾಧ್ಯ ಎಂಬುದು ದೀನ್‌ದಯಾಳ್ ಉಪಾಧ್ಯಾಯರ ಮೂವ ತತ್ವವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿ ಆಳುವ ಸರ್ಕಾರ ಶ್ರಮಿಸಬೇಕು ಎಂಬುದು ಅವರ ಮೂಲ ಉದ್ದೇಶವಾಗಿತ್ತು ಎಂದರು. ಪ್ರಸ್ತುತ ಭಾರತೀಯ ಜನತಾ ಪಾರ್ಟಿಗೆ ಶ್ಯಾಮಪ್ರಸಾದ್ ಮುಖರ್ಜಿ ಹಾಗೂ ದೀನ್‌ದಯಾಳ್ ಉಪಾಧ್ಯಾಯರು ಪ್ರೇರಣೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಟ್ಟಿ ಬೆಳೆಸಿದ ರೀತಿ, ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು. ದೀನ್‌ದಯಾಳ್ ಉಪಾಧ್ಯಾಯರು ಮೂಲತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದವರು. ಈ ಸಂಸ್ಥೆಯ ಭಾಗವೇ ಭಾರತೀಯ ಜನತಾ ಪಾರ್ಟಿ ಎಂದರು.
ಅಕ್ಟೋಬರ್ 1,2 ಮತ್ತು 3 ರಂದು ನಗರದ ವಿವಿಧ ವಾರ್ಡ್ ಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಗಣವೇಷ ಧರಿಸಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ದೀನ್‌ದಯಾಳ್ ಉಪಾಧ್ಯಾಯರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಇಡೀ ದೇಶದಲ್ಲಿ ಸಂಚರಿಸಿ ಭಾರತೀಯ ಜನಸಂಘವನ್ನು ಕಟ್ಟಿದರು. ಅವರ ಏಕಾತ್ಮತಾ ಮಾನವತಾ ವಾದೆ ಎಂಬುದು ಭಾರತೀಯ ಜನತಾಪಾರ್ಟಿಗೆ ಮೂಲ ತತ್ವವಾಗಿದೆ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ. ವೇದಮೂರ್ತಿ ಮಾತನಾಡಿ, ದೀನ್‌ದಯಾಳ್ ಉಪಾಧ್ಯಾಯರ 109ನೇ ಜನ್ಮಜಯಂತಿ ಅಂಗವಾಗಿ ದೇಶಾದ್ಯಂತ ತಾಯಿ ಹೆಸರಿನಲ್ಲಿ ಮನೆ ಮನೆ ಮುಂದೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬುದು ದೀನ್‌ದಯಾಳ್ ಉಪಾಧ್ಯಾಯರು ಉದ್ದೇಶವಾಗಿತ್ತು. ಬಡವರನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು ಎಂದು ಹೇಳಿದರು.ಜನಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಇಡೀ ದೇಶದಲ್ಲಿ ಸಂಘವನ್ನ ಬಲಪಡಿಸಲು ಶ್ರಮಿಸಿದವರು ಉಪಾಧ್ಯಾಯರು ಎಂದು ಹೇಳಿದರು.ಈ ಸಂದರ್ಭದಲ್ಲಿ ಬನಶಂಕರಿ ಮಹಾಶಕ್ತಿ ಕೇಂದ್ರದ ಮಂಜನಾಥ್, ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ. ವೇದಮೂರ್ತಿ, ನಿವೃತ್ತ ಡಿಡಿಪಿಐ ಈಶ್ವರಯ್ಯ, ಮುಖಂಡರಾದ ಬ್ಯಾಟರಂಗೇಗೌಡ, ಪ್ರೇಮಹೆಗಡೆ, ಹನುಮಯ್ಯ, ರುದ್ರೇಶಪ್ಪ, ಸಿದ್ದರಾಮಣ್ಣ, ಲಿಂಗರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು. ನಗರದ ಸಿರಾಗೇಟ್, ಚಿಕ್ಕಪೇಟೆ, ವಿನೋಬನಗರ, ಬನಶಂಕರಿ, ಸೋಮೇಶ್ವರಪುರಂ, ಕುವೆಂಪುನಗರ, ಮಾರುತಿ ನಗರ, ಕ್ಯಾತ್ಸಂದ್ರ ಸೇರಿದಂತೆ ೮ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ತಾಯಿ ಹೆಸರಿನಲ್ಲಿ ಸಸಿ ನೆಟ್ಟು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಆಚರಿಸಿದರು.