ಗದಗ: ಅತಿ ಅಪಾಯಕಾರಿ ಕಾರ್ಖಾನೆಗಳು ಮತ್ತು ಅವುಗಳ ಕಾರ್ಯ ಚಟುವಟಿಕೆಯಿಂದಾಗಿ ರಾಸಾಯನಿಕ ವಿಪತ್ತುಗಳು ಸಂಭವಿಸುತ್ತಿವೆ ಎಂದು ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವಿ.ಟಿ. ಮಾಗಳದ ತಿಳಿಸಿದರು.
ಭೋಪಾಲ ಅನಿಲ ದುರಂತದ ಹಿನ್ನೆಲೆ ಕೇಂದ್ರ ಸರ್ಕಾರವು ಪ್ರತಿ ವರ್ಷ ಡಿ. 4ರಂದು ರಾಸಾಯನಿಕ ದುರಂತ ನಿವಾರಣಾ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಅಪಾಯಕಾರಿ ರಾಸಾಯನಿಕ ವಸ್ತುಗಳನ್ನು ಶೇಖರಿಸುವ ಸ್ಥಳಗಳ ಸುರಕ್ಷತಾ ಮಟ್ಟವನ್ನು ಪರಿಶೀಲನೆ ನಡೆಸಿ ಮುಂಜಾಗ್ರತೆ ವಹಿಸುವುದು ಹಾಗೂ ಕಾರ್ಖಾನೆಯಲ್ಲಿ ಒದಗಿಸಿರುವ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ, ಸಿಂಚಕಗಳು, ಹೈಡ್ರೆಂಡ್ ವ್ಯವಸ್ಥೆ ಇತ್ಯಾದಿ ಸುರಕ್ಷತಾ ಕ್ರಮಗಳ ಬಗ್ಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಬಗ್ಗೆ ತರಬೇತಿ ನೀಡುವುದು. ವಿಪತ್ತುಗಳು ನೈಸರ್ಗಿಕವಾಗಿ ಬರಬಹುದು ಅಥವಾ ಮಾನವ ಅಜಾಗರೂಕತೆಯಿಂದ ಉಂಟಾಗಬಹುದು ಎಂದರು.
ಪ್ರಾಚಾರ್ಯ ಪಿ.ಜಿ. ಪಾಟೀಲ ಮಾತನಾಡಿ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಗ್ನಿಶಾಮಕ ಉಪಕರಣಗಳ ಕುರಿತು ಮತ್ತು ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ನೀಡುವ ಮೂಲಕ ಪರಿಣತಿಯನ್ನು ಹೆಚ್ಚಿಸುವುದು ಮತ್ತು ಅಪಾಯಕಾರಿ ರಾಸಾಯನಿಕಗಳ ದುರಂತ ಸಂಭವಿಸಿದರೆ ಮೂರು ತಲೆಮಾರಿನ ವರೆಗೆ ಅದರ ಪರಿಣಾಮ- ಪ್ರಭಾವ ಮನುಷ್ಯರು, ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೆ ಉಂಟಾಗುತ್ತದೆ. ಅದಕ್ಕಾಗಿ ಎಲ್ಲ ಕಾರ್ಖಾನೆಗಳು ವಿಪತ್ತು ತುರ್ತು ನಿರ್ವಹಣೆಗಾಗಿ ಯೋಜನೆ ರೂಪಿಸಿಕೊಂಡು ಅಗತ್ಯ ಕ್ರಮ ವಹಿಸಬೇಕು ಎಂದರು.ಐಕ್ಯುಎಸಿ ಸಂಚಾಲಕ ಡಾ. ಜಿ.ಕೆ. ರಮೇಶ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಪಟಗಾರ, ಅಧ್ಯಾಪಕರಾದ ಡಾ. ಕುಮಾರ ಎಚ್.ಕೆ., ಡಾ. ಲಕ್ಷ್ಮಿ ಕಿಲ್ಲೇದಾರ ಇದ್ದರು. ದಿವ್ಯಾ ಪ್ರಾರ್ಥಿಸಿದರು. ಚಂದನ ಸ್ವಾಗತಿಸಿದರು. ಪವಿತ್ರಾ ನಿರೂಪಿಸಿದರು. ಸ್ಪಂದನ ವಂದಿಸಿದರು.