ಮುಂಗಾರು ಮಳೆಗಾಲವು ಆರಂಭವಾಗುತ್ತಿರುವುದರಿಂದ ಭಾರಿ ಮಳೆ, ಬಿರುಗಾಳಿ ಹಾಗೂ ಸಿಡಿಲಿನ ಸಂದರ್ಭದಲ್ಲಿ ಸಾರ್ವಜನಿಕರು, ರೈತರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಹಾಗೂ ಜಾನುವಾರುಗಳ ಜೀವ ರಕ್ಷಣೆಗಾಗಿ ಸಾರ್ವಜನಿಕರು ಅತ್ಯಂತ ಜಾಗರೂಕತೆ ವಹಿಸಬೇಕು. ಹೆಸ್ಕಾಂ ಇಲಾಖೆಯ ಮುನ್ನೆಚ್ಚರಿಕೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೆಸ್ಕಾಂ ಇಲಾಖೆಯ ಅಥಣಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜಿ.ವಿ.ಸಂಪಣ್ಣವರ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಮುಂಗಾರು ಮಳೆಗಾಲವು ಆರಂಭವಾಗುತ್ತಿರುವುದರಿಂದ ಭಾರಿ ಮಳೆ, ಬಿರುಗಾಳಿ ಹಾಗೂ ಸಿಡಿಲಿನ ಸಂದರ್ಭದಲ್ಲಿ ಸಾರ್ವಜನಿಕರು, ರೈತರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಹಾಗೂ ಜಾನುವಾರುಗಳ ಜೀವ ರಕ್ಷಣೆಗಾಗಿ ಸಾರ್ವಜನಿಕರು ಅತ್ಯಂತ ಜಾಗರೂಕತೆ ವಹಿಸಬೇಕು. ಹೆಸ್ಕಾಂ ಇಲಾಖೆಯ ಮುನ್ನೆಚ್ಚರಿಕೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೆಸ್ಕಾಂ ಇಲಾಖೆಯ ಅಥಣಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜಿ.ವಿ.ಸಂಪಣ್ಣವರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಮುಂಗಾರು ಮಳೆ ಆರಂಭವಾಗುತ್ತಿದ್ದು, ವಿಪರೀತ ಗಾಳಿ ಮತ್ತು ಮಳೆಯಿಂದ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು, ಬಿರುಗಾಳಿ ಮತ್ತು ಮಳೆಗೆ ರಸ್ತೆ ಅಥವಾ ಹೊಲಗಳಲ್ಲಿ ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದರೆ ಅವುಗಳನ್ನು ಮುಟ್ಟಲು ಹೋಗಬೇಡಿ. ಕನಿಷ್ಠ ೧೦ ಮೀಟರ್ ದೂರವಿರಿ ಮತ್ತು ತಕ್ಷಣವೇ ಸ್ಥಳೀಯ ಹೆಸ್ಕಾಂ ಕಚೇರಿ ಅಥವಾ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಹರಿದು ಬಿದ್ದ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿಲ್ಲ ಎಂದು ನೀವಾಗಿಯೇ ನಿರ್ಧರಿಸಬೇಡಿ ಎಂದರು.ವಿದ್ಯುತ್ ಕಂಬ ಹಾಗೂ ಸ್ಟೇ ವೈರ್‌ಗಳನ್ನು ಮುಟ್ಟಬೇಡಿ, ಮಳೆಯ ತೇವಾಂಶದಿಂದಾಗಿ ಸಿಮೆಂಟ್ ಅಥವಾ ಕಬ್ಬಿಣದ ವಿದ್ಯುತ್ ಕಂಬಗಳು ಹಾಗೂ ಕಂಬಕ್ಕೆ ಆಸರೆ ನೀಡಿರುವ ಸ್ಟೇ ವೈರ್‌ಗಳಲ್ಲಿ ವಿದ್ಯುತ್ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇವುಗಳನ್ನು ಸ್ಪರ್ಶಿಸಬಾರದು. ಯಾವುದೇ ಕಾರಣಕ್ಕೂ ದನ-ಕರು, ಕುರಿ ಅಥವಾ ಇತರ ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಅಥವಾ ಸ್ಟೇ ವೈರ್‌ಗಳಿಗೆ ಕಟ್ಟಬಾರದು. ಇದು ಪ್ರಾಣಿಗಳಿಗೆ ಮಾರಕವಾಗಬಹುದು. ರೈತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಟ್ರಾನ್ಸ್‌ಫಾರ್ಮರ್‌ಗಳ (ಪರಿವರ್ತಕಗಳು) ಹತ್ತಿರ ಹೋಗಬೇಡಿ:
ಟ್ರಾನ್ಸ್‌ಫಾರ್ಮರ್ ಕೇಂದ್ರಗಳು ಅಥವಾ ವಿದ್ಯುತ್ ವಿತರಣಾ ಪೆಟ್ಟಿಗೆಗಳ (DTC) ಸುತ್ತ-ಮುತ್ತ ನೀರು ನಿಂತಿದ್ದರೆ ಅಲ್ಲಿಗೆ ಹೋಗಬೇಡಿ. ಮಳೆಯ ಸಮಯದಲ್ಲಿ ಟ್ರಾನ್ಸ್‌ಫಾರ್ಮರ್ ಕೆಳಗೆ ಆಶ್ರಯ ಪಡೆಯುವುದು ಅಥವಾ ವಾಹನಗಳನ್ನು ನಿಲ್ಲಿಸುವುದು ಅತ್ಯಂತ ಅಪಾಯ ಕಾರಿಯಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ:
ಮಕ್ಕಳು ವಿದ್ಯುತ್ ಕಂಬಗಳ ಸರಣಿ ಇರುವ ಜಾಗದಲ್ಲಿ ನೀರಿನ ಹೊಂಡಗಳ ಬಳಿ ಆಟವಾಡದಂತೆ ಪಾಲಕರು ನಿಗಾವಹಿಸಬೇಕು. ವಿದ್ಯುತ್ ತಂತಿಗಳು ಹಾದುಹೋಗಿರುವ ಮರಗಳನ್ನು ಮಕ್ಕಳು ಹತ್ತದಂತೆ ನೋಡಿಕೊಳ್ಳಿ. ಏಕೆಂದರೆ ಒದ್ದೆಯಾದ ಮರಗಳು ವಿದ್ಯುತ್ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ. ಶಾಲಾ ಕಾಲೇಜಿನ ಆವರಣಗಳಲ್ಲಿ, ವಸತಿ ನಿಲಯದ ಆವರಣಗಳಲ್ಲಿ ವಿದ್ಯುತ್ ತಂತಿ ಮತ್ತು ಕಂಬಗಳ ಸುರಕ್ಷತೆಯ ಬಗ್ಗೆ ನಿಗಾ ವಹಿಸಬೇಕು ಎಂದು ತಿಳಿಸಿದರು.ಗೃಹ ಬಳಕೆಯಲ್ಲಿ ಜಾಗ್ರತೆ:
ಮನೆಗಳ ಗೋಡೆಗಳಲ್ಲಿ ತೇವಾಂಶ ಅಥವಾ ನೀರು ಸೋರುತ್ತಿದ್ದರೇ ಆ ಭಾಗದ ಸ್ವಿಚ್ ಬೋರ್ಡ್‌ಗಳನ್ನು ಮುಟ್ಟಬೇಡಿ. ತಕ್ಷಣವೇ ಮೇನ್ ಸ್ವಿಚ್ (MCB) ಆಫ್ ಮಾಡಬೇಕು. ಒದ್ದೆ ಕೈಗಳಿಂದ ಅಥವಾ ಒದ್ದೆ ನೆಲದ ಮೇಲೆ ಬರಿಗಾಲಿನಲ್ಲಿ ನಿಂತು ಯಾವುದೇ ವಿದ್ಯುತ್ ಉಪಕರಣಗಳನ್ನು ಬಳಸಬೇಡಿ. ಸಿಡಿಲು ಮತ್ತು ಮಿಂಚಿನ ಸಂದರ್ಭದಲ್ಲಿ ಟಿವಿ, ಫ್ರಿಡ್ಜ್ ಹಾಗೂ ಕಂಪ್ಯೂಟರ್‌ಗಳ ಪ್ಲಗ್‌ಗಳನ್ನು ಸಾಕೆಟ್‌ಗಳಿಂದ ಹೊರತೆಗೆಯಿರಿ. ಯಾವುದೇ ತುರ್ತು ಸಂದರ್ಭ ಎದುರಾದಲ್ಲಿ ಅಥವಾ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಹೆಸ್ಕಾಂ ಸಹಾಯವಾಣಿ ಸಂಖ್ಯೆ-1912 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇಲ್ಲವೇ ಸ್ಥಳೀಯ ಶಾಖಾಧಿಕಾರಿಗಳ ಹಾಗೂ ಲೈನಮನ್‌ಗಳಿಗೆ ಕರೆಮಾಡಿ ಮಾಹಿತಿಯನ್ನು ಹಂಚಿಕೊಂಡು ವಿದ್ಯುತ್ ಅವಘಡಗಳಿಂದ ರಕ್ಷಣೆ ಪಡೆಯಬೇಕು. ಹೆಸ್ಕಾಂ ಇಲಾಖೆಯ ಸಿಬ್ಬಂದಿ ನಿಮ್ಮ ಕರೆಗೆ ಸ್ಪಂದಿಸದೆ ಹೋದಲ್ಲಿ ಅಥಣಿ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತರಬೇಕು. ವಿದ್ಯುತ್ ಅವಘಡಗಳಿಂದ ಜನ-ಜಾನುವಾರಗಳ ಪ್ರಾಣಹಾನಿ, ಆಸ್ತಿಹಾನಿ ತಪ್ಪಿಸಲು ಹೆಸ್ಕಾಂ ಸರ್ವ ರೀತಿಯಲ್ಲಿ ಸನ್ನದ್ದವಾಗಿದ್ದು, ಸಾರ್ವಜನಿಕರು ಹೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಕೋರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.