ವಿಜಯಪುರ: ಲಿಂಗೈಕ್ಯ ಆರ್.ಆರ್.ಕಲ್ಲೂರ ಹಾಗೂ ಲಿಂಗೈಕ್ಯ ಮೀನಾಕ್ಷಿ ಆರ್.ಕಲ್ಲೂರ ರವರ 5ನೇ ಪುಣ್ಯಸ್ಮರಣೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮ ಮೇ.21ರಂದು ಬೆಳಗ್ಗೆ 10.30ಕ್ಕೆ ನಗರದ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಅವರು ಜಿಲ್ಲೆಗಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಇಂಡಿ ಪಟ್ಟಣದಲ್ಲಿರುವ ಶಾಂತೇಶ್ವರ ಕಾಲೇಜಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಸಹಕಾರ ಹಾಗೂ ರಾಜಕೀಯ ವಲಯದಲ್ಲಿ ಅವರ ಸೇವೆ ಅನನ್ಯವಾಗಿದೆ. ಸಹಕಾರ ರಂಗದಲ್ಲಿ ಇಡಿ ರಾಜ್ಯದಲ್ಲಿಯೇ ಮೊಟ್ಟ ಮೊದಲಬಾರಿಗೆ ಮಹಿಳೆಯರಿಗಾಗಿ ವಿಜಯಪುರ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಿಸಿದ ಹೆಗ್ಗಳಿಕೆ ಇವರದ್ದಾಗಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಪಕ್ಷಾತೀತ, ಜಾತ್ಯಾತೀತವಾಗಿ ಬದುಕಿದ ಮೀನಾಕ್ಷಿ ಕಲ್ಲೂರ ಹಾಗೂ ಆರ್.ಆರ್.ಕಲ್ಲೂರ ರವರ ಈ ಅದ್ಭುತ ಸಮಾರಂಭವು ಅವರ ಅಭಿಮಾನಿಗಳು ಹಾಗೂ ಆಪ್ತ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ. ಕಲ್ಲೂರ ರವರು ಶಿಕ್ಷಣಕ್ಕಾಗಿ, ಸಾರ್ವಜನಿಕವಾಗಿ, ಸಹಕಾರಿ ಕ್ಷೇತ್ರದಲ್ಲಿ, ರಾಜಕೀಯ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.ದಂಪತಿಗಳಿಬ್ಬರೂ ಒಂದೇ ಮನಸ್ಥಿತಿಲ್ಲಿದ್ದು, ಹೊಂದಾಣಿಕೆಯಿಂದ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಿದ್ದಾರೆ. ಕರೋನಾ ಸಂದರ್ಭದಲ್ಲಿ ಆರ್.ಆರ್.ಕಲ್ಲೂರ ರವರು ಅವರು ದೇಹ ತ್ಯಾಗ ಮಾಡಿದ್ದರಿಂದ ಆಗ ಅವರ ಅಭಿಮಾನಿಗಳಿಗೆ, ಬಳಗಕ್ಕೆ ಅಂತಿಮದರ್ಶನ ಸಿಕ್ಕಿರಲಿಲ್ಲ. ಅವರ ನಿಧನದ ಬಳಿಕ ಕೇವಲ 12 ದಿನಗಳಲ್ಲಿಯೇ ಮೀನಾಕ್ಷಿ ಕಲ್ಲೂರ ರವರೂ ಸಹ ದೇಹತ್ಯಾಗ ಮಾಡಿದರು. ಹಾಗಾಗಿ ಈ ಕಾರ್ಯಕ್ರಮ ಸದ್ಯ ಸಂಭ್ರಮದಿಂದ ಕೈಗೊಳ್ಳಲು ನಿರ್ಧರಿಸಲಾಗಿದೆ. ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಭಾವತಿ ಎನ್ ಧರ್ಮಸಿಂಗ ಉಪಸ್ಥಿತರಿರಲಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಸೇರಿ ಅನೇಕ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಅಭೂತಪೂರ್ವ ಸಮಾರಂಭಕ್ಕೆ ಸುಮಾರು 4ರಿಂದ 5 ಸಾವಿರ ಅಭಿಮಾನಿಗಳು, ಸಾರ್ವಜನಿಕರು ಸಾಕ್ಷಿಯಾಗಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎನ್.ಎಸ್.ಲೋಣಿ, ಡಾ.ಎಂ.ಎಸ್.ಕಲ್ಲೂರ ಇದ್ದರು.