ಕನ್ನಡಪ್ರಭ ವಾರ್ತೆ ಬೆಳಗಾವಿ ಅಪಘಾತದಿಂದಾಗುವ ಜೀವ ಹಾನಿ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ತಿಳಿವಳಿಕೆ ಅತ್ಯಗತ್ಯವಾಗಿದೆ. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಪಘಾತದಿಂದಾಗುವ ಜೀವ ಹಾನಿ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ತಿಳಿವಳಿಕೆ ಅತ್ಯಗತ್ಯವಾಗಿದೆ. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ-2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಸ್ತೆ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಪ್ರತಿನಿತ್ಯ ಅಪಘಾತ ಪ್ರಕರಣಗಳು ಕಂಡು ಬರುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಜಾಗೃತಿ ಹೊಂದುವ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಯುವಕರು ಅತ್ಯಂತ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ನಿಯಮಗಳು ಇರುವುದು ನಮ್ಮ ಒಳ್ಳೆಯದಕ್ಕಾಗಿ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಬೇಕು. ವಾಹನ ಚಾಲಕರು ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಕಡ್ಡಾಯವಾಗಿ ಬಳಸಬೇಕು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು ಹಾಗೂ ವೇಗ ನಿಯಂತ್ರಣಕ್ಕೆ ವಿಶೇಷ ಗಮನ ನೀಡಬೇಕು ಎಂದು ಸಂದೀಪ ಪಾಟೀಲ ತಿಳಿಸಿದರು.ಬೆಳಗಾವಿ ವಿಭಾಗದ ರಸ್ತೆ ಸಾರಿಗೆ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ ಮಾತನಾಡಿ, ರಸ್ತೆ ಅಪಘಾತಗಳಿಂದ ಅನೇಕ ಅಮೂಲ್ಯ ಜೀವಗಳು ಹಾನಿಯಾಗುತ್ತಿವೆ. ನಿಯಮ ಪಾಲನೆ ಮತ್ತು ಜವಾಬ್ದಾರಿಯುತ ಚಾಲನೆಯಿಂದ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ರಸ್ತೆ ಸುರಕ್ಷಿತ ನಿಯಮ ಪಾಲನೆ-ಸುರಕ್ಷಿತ ಜೀವನ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಹೇಳಿದರು.ಜಾಥಾಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮಂಜುನಾಥ ನಾಯಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ನಗರದ ಹೊಸ ನ್ಯಾಯಾಲಯ ಆವರಣದಿಂದ ಜಾಗೃತಿ ಜಾಥಾ ಚನ್ನಮ್ಮ ವೃತ್ತದ ಮಾರ್ಗವಾಗಿ ರಸ್ತೆ ಸಾರಿಗೆ ಇಲಾಖೆ ಕಚೇರಿಗೆ ತಲುಪಿತು. ಜಾಗೃತಿ ಜಾಥಾದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ, ಪ್ರಾಣ ಉಳಿಸಿ, ಸೀಟ್ ಬೆಲ್ಟ್ ಕಡ್ಡಾಯ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ಸಮಯಕ್ಕಿಂತ ಜೀವ ಮುಖ್ಯ, ಮೊಬೈಲ್ ಬಳಸಬೇಡಿ ಎಂಬ ವಿವಿಧ ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.ಮಹಾನಗರ ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಎನ್.ನಿರಂಜನ್ ಅರಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ ಮುಂಡಾಸ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎಂ ಕಾಂಬಳೆ, ಡಿಡಿಪಿಐ ಲೀಲಾವತಿ ಹಿರೇಮಠ, ಕ್ಷೇತ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.