ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಗಳು: ಡಾ.ಎಚ್.ಸಿ. ಮಹದೇವಪ್ಪ

KannadaprabhaNewsNetwork |  
Published : Mar 12, 2024, 02:02 AM IST
1 | Kannada Prabha

ಸಾರಾಂಶ

ಹೊಸದಾಗಿ 9 ಇಂದಿರಾ ಕ್ಯಾಂಟೀನ್ ಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈಗಾಗಲೇ 2016ರ ಇಸವಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳು ಆಗಿದ್ದಾಗ ಇಂದಿರಾ ಕ್ಯಾಂಟೀನ್ ಗಳನ್ನು ಹೊಸದಾಗಿ ಪ್ರಾರಂಭಿಸಲಾಯಿತು. 5 ರು.ಗೆ ತಿಂಡಿ, 10 ರು.ಗೆ ಊಟ ನೀಡಲು ಆರಂಭಿಸಲಾಯಿತು. ಕರ್ನಾಟಕದಲ್ಲಿ 520 ಇಂದಿರಾ ಕ್ಯಾಂಟೀನ್ ಗಳು ಕಾರ್ಯ ನಿರ್ವಹಿಸುತ್ತಿವೆ

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿರಾ ಕ್ಯಾಂಟಿನ್ ಗಳು ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಜಿಲ್ಲಾಡಳಿತವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ 9 ಇಂದಿರಾ ಕ್ಯಾಂಟಿನ್ ಗಳ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಮುಖ್ಯಮಂತ್ರಿಗಳ ನಗರೋತ್ಥಾನ 4ರಡಿ ಆಯ್ದ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಿ ಅವರು ಮಾತನಾಡಿದರು.

ಹೊಸದಾಗಿ 9 ಇಂದಿರಾ ಕ್ಯಾಂಟೀನ್ ಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈಗಾಗಲೇ 2016ರ ಇಸವಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳು ಆಗಿದ್ದಾಗ ಇಂದಿರಾ ಕ್ಯಾಂಟೀನ್ ಗಳನ್ನು ಹೊಸದಾಗಿ ಪ್ರಾರಂಭಿಸಲಾಯಿತು. 5 ರು.ಗೆ ತಿಂಡಿ, 10 ರು.ಗೆ ಊಟ ನೀಡಲು ಆರಂಭಿಸಲಾಯಿತು. ಕರ್ನಾಟಕದಲ್ಲಿ 520 ಇಂದಿರಾ ಕ್ಯಾಂಟೀನ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಇದರಿಂದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಕಡಿಮೆ ದರದಲ್ಲಿ ಉತ್ತಮ ತಿಂಡಿ ಊಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 17 ಇಂದಿರಾ ಕ್ಯಾಂಟೀನ್ ಗಳು ಕೆಲಸ ಮಾಡುತ್ತಿದ್ದು, ಇದರಲ್ಲಿ 12 ಮೈಸೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಂದಿರಾ ಕ್ಯಾಂಟೀನ್ ಗಳಲ್ಲಿ ಹೊಸದಾಗಿ ರಾಗಿ ಮುದ್ದೆ, ಸೊಪ್ಪು ಸಾರು ನೀಡಲು ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರದಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ಗಳ ವಿತರಣೆ ಮಾಡಲಾಗುತ್ತಿದೆ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಸಂವಿಧಾನದ ಮೂಲ ಉದ್ದೇಶವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಇದೇ ವೇಳೆ ವಿವಿಧ ಫಲಾನುಭವಿಗಳಿಗೆ ಸಹಾಯಧನ ಸೌಲಭ್ಯವನ್ನು ಸಚಿವರು ವಿತರಿಸಿದರು. ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಎಂಡಿಎ ಅಧ್ಯಕ್ಷ ಕೆ. ಮರಿಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮೊದಲಾದವರು ಇದ್ದರು.

ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದ ಬಡ ವರ್ಗದ ಜನತೆಗೆ ಆಹಾರ, ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಯುವನಿಧಿ ಸಹಾಯಧನ ದೊರೆಯುತ್ತಿದೆ. ಇದರಿಂದ ಜನರ ಜೀವನಮಟ್ಟ ಸುಧಾರಿಸುತ್ತಿದೆ.

- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರುಸರ್ಕಾರ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ದುಡಿಯುವ ವರ್ಗಕ್ಕೆ ಕಡಿಮೆ ದರದಲ್ಲಿ ಉತ್ತಮ ಆಹಾರ ನೀಡಲು ಇಂದಿರಾ ಕ್ಯಾಂಟೀನ್ ಗಳನ್ನು ಸರ್ಕಾರದ ವತಿಯಿಂದ ತೆರೆಯಲಾಗುತ್ತಿದೆ. ದುಡಿಮೆ ಮಾಡುವ ವರ್ಗಕ್ಕೆ ಹೊಟ್ಟೆ ತುಂಬಾ ಆಹಾರವನ್ನು ಕಡಿಮೆ ದರದಲ್ಲಿ ನೀಡುವುದು ಇದರ ಉದ್ದೇಶವಾಗಿದೆ. ಡಿಸಿ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುತ್ತಿರುವುದರಿಂದ ವಿವಿಧ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

- ತನ್ವೀರ್ ಸೇಠ್, ಶಾಸಕರು

----

ಇಂದು ನಗರದಲ್ಲಿ 9 ಇಂದಿರಾ ಕ್ಯಾಂಟೀನ್ ಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 17 ಇಂದಿರಾ ಕ್ಯಾಂಟೀನ್ ಗಳು ಕಾರ್ಯ ನಿರ್ವಹಿಸುತ್ತಿವೆ. ಊಟದ ಮೆನುವನ್ನು ಬದಲಾಯಿಸಿಕೊಂಡು ಮುದ್ದೆ ಮತ್ತು ಸೊಪ್ಪು ಸಾಂಬಾರ್ ನೀಡಲು ಟೆಂಡರ್ ನಲ್ಲಿ ಸೇರಿಸಲಾಗಿದೆ.

- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ