ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ತಾಯಿ ಕಾರ್ಡ್ ಮತ್ತು ಆಧಾರ ಕಾರ್ಡ್ ಇಲ್ಲದೇ ಗರ್ಭಿಣಿ, ಬಾಣಂತಿಯರಿಗೆ ಶಿರಹಟ್ಟಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ತಾಯಿ ಕಾರ್ಡ್ ಇಲ್ಲದೇ ಚಿಕಿತ್ಸೆ ನೀಡಲು ಆಸ್ಪತ್ರೆಯ ವೈದ್ಯರು ಮೀನಮೇಷ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಆತಂಕ ಎದುರಿಸುವಂತಾಗಿದೆ.ಮಹಿಳೆ ಗರ್ಭಿಣಿಯಾದ ದಿನದಿಂದ ಹಾಗೂ ಹೆರಿಗೆ ನಂತರವೂ ಆಕೆಯ ಆರೋಗ್ಯದ ಮೇಲೆ ನಿಗಾ ಇರಿಸುವ ಉದ್ದೇಶದಿಂದ ತಾಯಿ ಕಾರ್ಡ್ ಯೋಜನೆ ಜಾರಿಗೆ ಬಂದಿದೆ. ಆದರೆ, ಗರ್ಭಿಣಿ ತಾಯಿ ಮತ್ತು ಶಿಶು ಆರೈಕೆ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿ ಆಗುತ್ತಿಲ್ಲ ಎನ್ನುವುದಕ್ಕೆ ಶಿರಹಟ್ಟಿ ತಾಲೂಕಾಸ್ಪತ್ರೆ ಸಾಕ್ಷಿಯಾಗಿದೆ.
ಆಸ್ಪತ್ರೆಗೆ ಬರುವ ಯಾವುದೇ ಗರ್ಭಿಣಿಯು ತಾಯಿಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳದೇ ಇದ್ದರೆ ನೋಂದಣಿ ಮಾಡಿಸಿ ತಾಯಿ ಕಾರ್ಡ್ ನೀಡುವ ಹೊಣೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯದಾಗಿರುತ್ತದೆ. ಆದರೆ ಈ ಯೋಜನೆಯಿಂದ ಶಿರಹಟ್ಟಿ ತಾಲೂಕಿನ ಸಾವಿರಾರು ಬಾಣಂತಿಯರು ಸರ್ಕಾರದ ಸವಲತ್ತಿನಿಂದ ವಂಚಿತರಾಗಿದ್ದಾರೆ.ತಾಯಿ ಕಾರ್ಡ್ ಇದ್ದರೆ ಚಿಕಿತ್ಸೆ:
ಗರ್ಭ ಧರಿಸಿದ ಮೂರು ತಿಂಗಳ ಒಳಗೆ ಮಹಿಳೆ ಈ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಶಿರಹಟ್ಟಿ ತಾಲೂಕಾಸ್ಪತ್ರೆಯಲ್ಲಿ ನೋಂದಣಿ ಮಾಡಿಸಿದ ಗರ್ಭಿಣಿಯರಿಗೆ ತಾಯಿಕಾರ್ಡ್‌ನ್ನೇ ನೀಡುತ್ತಿಲ್ಲ. ಕೇಳಿದರೆ ತಾಯಿ ಕಾರ್ಡ್ ಬಂದಿಲ್ಲ. ನೀವೇ ನೋಟ್‌ಬುಕ್ ತೆಗೆದುಕೊಂಡು ಬನ್ನಿ ಎಂದು ಗರ್ಭಿಣಿ, ಬಾಣಂತಿಯರನ್ನು ಅಲೆದಾಡಿಸುತ್ತಿದ್ದಾರೆ.ತಾಯಿ ಕಾರ್ಡ್ ಇಲ್ಲದೇ ಗರ್ಭಿಣಿ, ಬಾಣಂತಿಯರು ರಕ್ತ ಪರೀಕ್ಷೆ, ಇಂಜೆಕ್ಷನ್, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲದಕ್ಕೂ ಹಣ ಕೊಡಬೇಕು. ಹೊರಗಿನ ಮೆಡಿಕಲ್‌ನಲ್ಲಿ ಔಷಧ ಖರೀದಿಸುವಂತೆ ಚೀಟಿ ಬರೆದುಕೊಡುತ್ತಾರೆ. ಡಾಕ್ಟರ್ ಬರುವುದು ಗೊತ್ತಾಗುವುದೇ ಇಲ್ಲ. ಬರೀ ನರ್ಸಗಳು ಮಾತ್ರ ಇರುತ್ತಾರೆ. ಜನ ಕೇಳಿದರೆ ಮೀಟಿಂಗ್ ಹೋಗಿದ್ದಾರೆ ಎಂದು ಸಿದ್ಧ ಉತ್ತರ ಸಿಗುತ್ತದೆ.
ರೋಗಿಗಳ ಭಾವನೆಗೆ ಬೆಲೆ ಇಲ್ಲದಂತಾಗಿದೆ. ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಮಾಹಿತಿ ಕೊಡುವ ಜತೆಗೆ ಶುಗರ್, ಬಿಪಿ, ರಕ್ತ ಪರೀಕ್ಷೆ, ಹೈಟ್- ವೇಟ್, ಹೊಟ್ಟೆ ಪರೀಕ್ಷೆ ಮಾಡಬೇಕು ಎಂಬ ನಿಯಮವಿದ್ದರೂ ಈ ತಾಲೂಕಾಸ್ಪತ್ರೆಯಲ್ಲಿ ಯಾವುದನ್ನೂ ಮಾಡುವುದಿಲ್ಲ.ತಾಲೂಕಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಆರೋಗ್ಯ ಕೇಂದ್ರಗಳ ಮೂಲಕ ಪೂರೈಕೆಯಾಗಬೇಕಾಗಿದ್ದ ತಾಯಿ ಕಾರ್ಡ್ ಕಳೆದ ೬ ತಿಂಗಳಿನಿಂದ ದೊರೆಯುತ್ತಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಸದ್ಯ ಮಾರುಕಟ್ಟೆಗೆ ಹೋಗಿ ನೋಟ್‌ಬುಕ್ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿರುವುದು ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ.
ತಾಯಿ ಕಾರ್ಡ್‌ನಲ್ಲಿ ಗರ್ಭಿಣಿ ಹಾಗೂ ಮಗುವಿನ ಐದು ವರ್ಷದ ಆರೋಗ್ಯ ಮಾಹಿತಿಯಿದೆ. ಗರ್ಭಿಣಿಯಾದ ಆರಂಭದಿಂದ ಹಿಡಿದು ಹೆರಿಗೆಯಾಗಿ ಮಗುವಿನ ಲಾಲನೆ, ಪಾಲನೆ ಹೇಗೆ ಮಾಡಬೇಕು, ಪೋಲಿಯೊ ಸೇರಿದಂತೆ ಇನ್ನಿತರ ಲಸಿಕೆ, ಮಗುವಿನ ಬೆಳವಣಿಗೆ ಹೇಗೆ ಇರಬೇಕು, ಆಹಾರ ಪದ್ಧತಿ ಸೇರಿದಂತೆ ಎಲ್ಲ ಮಾಹಿತಿ ನೀಡಲಾಗಿದ್ದು, ಮಹಿಳೆಯರಿಗೆ ತಾಯಿಕಾರ್ಡ್ ಅತ್ಯಂತ ಉಪಯುಕ್ತವಾಗಿದೆ. ಆದರೆ ಸಧ್ಯ ಗರ್ಭಿಣಿಯರಿಗೆ ಕೊಡಲು ಆ ಕಾರ್ಡ್ ಲಭ್ಯವಿಲ್ಲ.ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯ, ವೈದ್ಯರ ಕೊರತೆ ಮಧ್ಯೆಯೂ ಈಗ ಕಾರ್ಡ್ ಸಿಗದೇ ಇರುವುದು ಗರ್ಭಿಣಿಯರು ಪ್ರಯಾಸಪಡುವಂತಾಗಿದೆ. ಕೆಲ ಗರ್ಭಿಣಿಯರು ಆಶಾ ಕಾರ್ಯಕರ್ತೆಯರ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ, ಅಂಗನವಾಡಿ ಕಾರ್ಯಕತೇಯರ ಬಳಿ ಕೇಳಿ, ಕೇಳಿ ಸುಸ್ತಾಗುತ್ತಿದ್ದಾರೆ ವಿನಃ ಯಾವುದೇ ಫಲಿತಾಂಶ ಸಿಗುತ್ತಿಲ್ಲ.
ಈ ಹಿಂದೆ ರಾಜ್ಯ ಹಂತದಿಂದ ತಾಯಿಕಾರ್ಡ್ ಪೂರೈಕೆ ಮಾಡಲಾಗುತ್ತಿತ್ತು. ಸಧ್ಯ ಜಿಲ್ಲಾ ಕೇಂದ್ರದಲ್ಲಿ ಪ್ರಿಂಟ್ ಹಾಕಿ ಕೊಡುತ್ತಿದ್ದು, ಸ್ವಲ್ಪ ವಿಳಂಭವಾಗುತ್ತಿದೆ. ಈ ಹಿಂದೆ ೫೦೦ಕಾರ್ಡ್ ಪೂರೈಕೆಯಾಗಿದ್ದು, ಶಿರಹಟ್ಟಿ ತಾಲೂಕಾಸ್ಪತ್ರೆ ಸೇರಿದಂತೆ ೬ ಕೇಂದ್ರಗಳಿಗೆ ನೀಡಲಾಗಿದೆ. ಹೆರಿಗೆ ಸಮೀಪವಿದ್ದ ಮಹಿಳೆಯರಿಗೆ ಮೊದಲು ಕೊಡಬೇಕು ಎಂದು ಸೂಚನೆ ಇರುವುದರಿಂದ ಹಂತಹಂತವಾಗಿ ನೀಡಲಾಗುತ್ತಿದೆ. ಸದ್ಯ ನೋಟ್‌ಬುಕ್‌ನಲ್ಲಿ ಚಿಕಿತ್ಸೆ ನೀಡಿದ ಮಾಹಿತಿ ಬರೆದು ಕೊಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಹೇಳಿದರು.