ಗದಗ: ಪ್ರತಿಯೊಬ್ಬ ಗರ್ಭಿಣಿ ಆರೋಗ್ಯಯುತ ಜೀವನ ನಡೆಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು. ಹೆಚ್.ಐ.ವಿ ಮುಕ್ತ ಮಗುವನ್ನು ಪಡೆಯಲು ಕಾಯಿಲೆಯ ಮಾಹಿತಿ ಪಡೆದು ಎಲ್ಲ ಗರ್ಭಿಣಿಯರು ತಪಾಸಣೆ ಮಾಡಿಸಿಕೊಳ್ಳಬೇಕೆಂದು ಡಾ. ಅರುಂಧತಿ ಕುಲಕರ್ಣಿ ಹೇಳಿದರು.
ಪ್ರತಿಯೊಬ್ಬ ಗರ್ಭಿಣಿಯು ಪ್ರತಿ ತ್ರೈಮಾಸಿಕದಲ್ಲಿ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಲು ತಿಳಿಸಿದರು. ಪ್ರತಿದಿನ ಯೋಗ ವ್ಯಾಯಾಮ ಮಾಡುತ್ತ ಚಟುವಟಿಕೆಯಿಂದ ಇರಲು ತಿಳಿಸಿದರು.
ಹೆಚ್.ಐ.ವಿ ಏಡ್ಸ್ ಕಾಯ್ದೆ ಜಾರಿಯಾಗಿದ್ದು, ಹೆಚ್.ಐ.ವಿಯೊಂದಿಗೆ ಬದುಕುತ್ತಿರುವ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರ ಹಾಗೂ ಖಾಸಗಿ ಕ್ಷೇತ್ರದಲ್ಲಿ ಹೆಚ್.ಐ.ವಿ ಸಂಬಂಧಿತ ತಾರತಮ್ಯದ ವಿರುದ್ಧ ಕಾನೂನಿನ ರಕ್ಷಣೆ ನೀಡಿದೆ ಎಂದರು.ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ಮಾತನಾಡಿ, ಹೆಚ್.ಐ.ವಿ. ಕಾರ್ಯಕ್ರಮ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯಗತಗೊಂಡಿದ್ದು, ಹೆಚ್.ಐ.ವಿ. ಸೋಂಕಿತ ಗರ್ಭಿಣಿ ಮಹಿಳೆಯಿಂದ ಹುಟ್ಟಿದ ಮಕ್ಕಳು ಹೆಚ್.ಐ.ವಿ.ಯಿಂದ ಮುಕ್ತವಾಗಿದ್ದು ಉತ್ತಮ ಪ್ರಗತಿಯಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯು ಹೆಚ್.ಐ.ವಿ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಹೆಚ್.ಐ.ವಿ. ಸೋಂಕಿನ ಪ್ರಮಾಣ ೦.೦೩% ಇದ್ದು, ಸೋಂಕನ್ನು ಸೊನ್ನೆಗೆ ತರಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಯಿಯಿಂದ ಮಗುವಿಗೆ ಸೋಂಕಿನ ನಿರ್ಮೂಲನೆಗಾಗಿ, ಹೆಪಟೆಟಿಸ್ ಹಾಗೂ ಸಿಫಿಲಿಸ್ ನಿರ್ಮೂಲನೆಗಾಗಿ ಗರ್ಭಿಣಿಯರಿಗೆ ಈ ಮೂರು ರೋಗಗಳ ತಪಾಸಣೆ ಮಾಡಿ, ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುವುದರ ಮುಖಾಂತರ ಜಾಗೃತಿಯನ್ನು ಮೂಡಿಸಲಾಯಿತು.