ಮಾ.3ರಂದು ಪಲ್ಸ್ ಪೋಲಿಯೋ: ಸಿದ್ಧತಾ ಸಭೆ ನಡೆಸಿದ ಜಿಲ್ಲಾಧಿಕಾರಿ

KannadaprabhaNewsNetwork |  
Published : Feb 08, 2024, 01:34 AM IST
32 | Kannada Prabha

ಸಾರಾಂಶ

ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ರೋಟರಿ, ಲಯನ್ಸ್, ರೆಡ್‌ಕ್ರಾಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವು ಮಾ. 3ರಂದು ನಡೆಯಲಿದ್ದು, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಸಿದ್ಧತೆ ಬಗ್ಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಲ್ಸ್ ಪೋಲಿಯೋ ಕಾರ್ಯಕ್ರಮ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಪಂಚಾಯತ್ ರಾಜ್, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರಾದೇಶಿಕ ಸಾರಿಗೆ ಇಲಾಖೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಶಾಲೆಗಳು, ಬಸ್ ನಿಲ್ದಾಣಗಳಲ್ಲಿ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಲು ಸಹಕಾರ ನೀಡಬೇಕು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅಗತ್ಯ ವಾಹನ ನಿಯೋಜಿಸಬೇಕು. ಅಂದು ವಿದ್ಯುತ್ ಸಂಪರ್ಕವನ್ನು ನಿರಂತರವಾಗಿ ಕಲ್ಪಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ರೋಟರಿ, ಲಯನ್ಸ್, ರೆಡ್‌ಕ್ರಾಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್, ಪಲ್ಸ್ ಪೋಲಿಯೋ ಕಾರ್ಯಕ್ರಮವು ಮಾರ್ಚ್ 3ರಂದು ಬೂತ್ ಮಟ್ಟದಲ್ಲಿ ನಡೆಯಲಿದೆ. ಮಾರ್ಚ್ 4, 5 ಮತ್ತು 6ರಂದು ಮೂರು ದಿನಗಳ ಕಾಲ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹಾಗೂ ಮಾರ್ಚ್ 4 ಮತ್ತು 5ರಂದು ಎರಡು ದಿನಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.

42, 375 ಮಕ್ಕಳಿಗೆ ಪೋಲಿಯೋ ಹನಿ: ಕೊಡಗು ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 42,375 ಮಕ್ಕಳಿದ್ದು, 4,400 ನಗರ ಪ್ರದೇಶದ ಮಕ್ಕಳು ಹಾಗೂ 37,975 ಗ್ರಾಮೀಣ ಪ್ರದೇಶದ ಮಕ್ಕಳು ಇದ್ದಾರೆ. ಹಾಗೆಯೇ 5 ವರ್ಷದೊಳಗಿನ ವಲಸಿಗ ಮಕ್ಕಳು ಸೇರಿದಂತೆ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ಡಾ.ಸತೀಶ್ ಕುಮಾರ್ ಅವರು ಮಾಹಿತಿ ನೀಡಿದರು.

464 ಬೂತ್‌ ಸ್ಥಾಪನೆ: ಜಿಲ್ಲೆಯಲ್ಲಿ ಪೋಲಿಯೋ ಹನಿ ಹಾಕುವ ನಿಟ್ಟಿನಲ್ಲಿ 464 ಬೂತ್‌ಗಳನ್ನು ಸ್ಥಾಪಿಸಲಾಗಿದೆ. 30 ಸಂಚಾರಿ ಬೂತ್‌ಗಳು, 06 ಮೊಬೈಲ್ ತಂಡಗಳನ್ನು ನಿಯೋಜಿಸಲಾಗುತ್ತದೆ. ಜೊತೆಗೆ 1928 ಲಸಿಕಾದಾರರು, 86 ಮಂದಿ ಮೇಲ್ವಿಚಾರಕರು, ಹಾಗೆಯೇ 924 ಮಂದಿ ಮನೆ ಮನೆಗೆ ಭೇಟಿ ನೀಡುವ ತಂಡವನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ 80 ವಾಹನಗಳು ಅಗತ್ಯವಿದ್ದು, ವಾಹನ ನಿಯೋಜನೆಗೆ ಸಹಕರಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯವರಲ್ಲಿ ಡಿಎಚ್‌ಒ ಕೋರಿದರು.

ಪ್ರವಾಸಿ ಸ್ಥಳಗಳು, ಬಸ್ ನಿಲ್ದಾಣಗಳಲ್ಲಿ ಪೋಲಿಯೋ ಬೂತ್ ತೆರೆಯಲು ಅವಕಾಶ ಮಾಡಬೇಕು. ಕಾರ್ಮಿಕರ ಮಕ್ಕಳು, ಕೊಳಗೇರಿ ಪ್ರದೇಶದಲ್ಲಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲು ಸಹಕರಿಸುವಂತೆ ಕೋರಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ, ಕಾರ್ಮಿಕ, ಪೊಲೀಸ್, ವೈದ್ಯಕೀಯ ಶಿಕ್ಷಣ, ಸೆಸ್ಕ್, ಕೆಎಸ್‌ಆರ್‌ಟಿಸಿ, ಪ್ರವಾಸೋದ್ಯಮ ಹೀಗೆ ಎಲ್ಲಾ ಇಲಾಖೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.

ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾಹಿತಿ ನೀಡಿ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಒಂದು ವಾಹನವಿದ್ದು, ಒದಗಿಸಲಾಗುವುದು ಎಂದರು. ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕ ಡಾ. ಚೇತನ್. ರೋಟರಿ ಸಂಸ್ಥೆಯ ಅಚ್ಚಯ್ಯ, ರೋಟರಿಯನ್ ಮ್ರಾನಳಿನಿ ಅವರು ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿಗಳಾದ ಡಾ. ಚೇತನ್, ಇಂಧುದರ್, ಪ್ರಮೋದ್ ರೈ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು, ಪೌರಾಯುಕ್ತ ವಿಜಯ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಎಂ. ಕೃಷ್ಣಪ್ಪ, ಪ್ರಾದೇಶಿಕ ಸಾರಿಗೆ ಕಚೇರಿಯ ಮೇಲ್ವಿಚಾರಕಿ ಸಲೀಮ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!