ಕನ್ನಡಪ್ರಭ ವಾರ್ತೆ ಬೆಳಗಾವಿ
ಪೀಡಿಯಾಟ್ರಿಕ್ ನೆಪ್ರಾಲಜಿಸ್ಟ್ ಡಾ.ಮಹಾಂತೇಶ ವಿ ಪಾಟೀಲ್ ಅವರ ಟೀಮ್ ಯಶಸ್ವಿಯಾಗಿ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ ನಡೆಸಿತು. ಉತ್ತರ ಕರ್ನಾಟಕದಲ್ಲಿ ಕೆಎಲ್ಇ ಆಸ್ಪತ್ರೆಯಲ್ಲಿ ಮಾತ್ರ ಈ ಸೌಲಭ್ಯವಿದೆ. ಮಕ್ಕಳು ಡಯಾಲಿಸಿಸ್‌ಗೆ ಒಳಗಾಗುವುದು ಬಹಳ ಕಷ್ಟ. ಡಯಾಲಿಸಿಸ್ ಸಮಯದಲ್ಲಿ ಪೋಷಕರು ಮತ್ತು ಮಕ್ಕಳು ಇಬ್ಬರೂ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಮಕ್ಕಳು ವಿದ್ಯಾಭ್ಯಾಸ ವಂಚಿತರಾದರೆ, ಪಾಲಕರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಡಯಾಲಿಸಿಸ್‌ಗಿಂತ ಕಿಡ್ನಿ ಕಸಿ ಮಾಡುವುದು ಮಕ್ಕಳಿಗೆ ಉತ್ತಮ ಚಿಕಿತ್ಸೆಯಾಗಿದೆ. ಕಿಡ್ನಿ ಕಸಿ ನಂತರ ಇಬ್ಬರೂ ರೋಗಿಗಳು ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ ಎಂದು ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ನೇತೃತ್ವ ವಹಿಸಿದ್ದ ಮಕ್ಕಳ ತಜ್ಞ ಡಾ.ಮಹಾಂತೇಶ ಪಾಟೀಲ ತಿಳಿಸಿದ್ದಾರೆ.
ಜೆ.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ ಅವರ ಸಹಕಾರದಲ್ಲಿ ಮೂತ್ರಶಾಸ್ತ್ರಜ್ಞ ಡಾ.ಆರ್.ಬಿ.ನೇರ್ಲಿ, ಡಾ.ವಿಕ್ರಮ್ ಪ್ರಭಾ, ನಾಳೀಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್ ಸಲ್ಡಾನ್ಹಾ, ಅರಿವಳಿಕೆ ತಜ್ಞ ಡಾ.ಮಾನೆ ಮತ್ತು ಡಾ ವಿನಾಯಕ ಜನ್ನು ಸಹಕಾರ ನೀಡಿದರು.ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ದಯಾನಂದ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವನ್ನು ಅಭಿನಂದಿಸಿದ್ದಾರೆ.