ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನಕ್ಕೆ ಸಿದ್ಧತೆ

KannadaprabhaNewsNetwork | Published : Nov 13, 2024 12:08 AM

ಸಾರಾಂಶ

ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ಸಂಡೂರು: ವಿಧಾನಸಭೆ ಉಪಚುನಾವಣೆಗೆ ನ. ೧೩ರಂದು ಮತದಾನ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದಿಂದ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ಸಂಡೂರು ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಸಂಡೂರು ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನ. ೧೩ರಂದು ಬೆಳಗ್ಗೆ ೫.೩೦ಕ್ಕೆ ರಾಜಕೀಯ ಪಕ್ಷಗಳ ಮುಖಂಡರ ಸಮಕ್ಷಮದಲ್ಲಿ ಅಣಕು ಮತದಾನ ನಡೆಯಲಿದೆ. ಆನಂತರ ಬೆಳಗ್ಗೆ ೭ರಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ ೬ರ ವರೆಗೆ ನಡೆಯಲಿದೆ. ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಡೂರು ವಿಧಾನಸಭೆ ವ್ಯಾಪ್ತಿಯಲ್ಲಿ ಒಟ್ಟು ೨,೩೬,೪೦೨ ಮತದಾರರಿದ್ದಾರೆ. ೧,೧೭,೯೩೫ ಪುರುಷ ಮತದಾರರು, ೧,೧೮,೪೩೮ ಮಹಿಳಾ ಮತದಾರರು ಹಾಗೂ ೨೯ ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ. ಒಟ್ಟು ೨೫೩ ಮತಗಟ್ಟೆಗಳಿವೆ ಎಂದು ಮಾಹಿತಿ ನೀಡಿದರು.

ನಗರ ವ್ಯಾಪ್ತಿಯಲ್ಲಿ ೬೮ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ೧೮೫ ಮತದಾನ ಕೇಂದ್ರಗಳಿವೆ. ಸಂಡೂರು ೧೭, ತೋರಣಗಲ್ಲು ೨೭ ಮತ್ತು ಚೋರನೂರು ೧೬ ಮತಗಟ್ಟೆ ಸೇರಿ ಒಟ್ಟು ೬೦ ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದೆ. ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಂಡೂರು ವಿಧಾನಸಭೆ ಉಪಚುನಾವಣೆಗೆ ೩೨೪ ಬ್ಯಾಲೆಟ್ ಯುನಿಟ್, ೩೨೪ ಕಂಟ್ರೋಲ್ ಯುನಿಟ್ ಮತ್ತು ೩೭೯ ವಿವಿ ಪ್ಯಾಟ್ ಮತಯಂತ್ರಗಳನ್ನು ಬಳಸಲಾಗುವುದು. ಹೆಚ್ಚುವರಿಯಾಗಿ ೩೦೪ ಬ್ಯಾಲೆಟ್ ಯುನಿಟ್, ೩೦೪ ಕಂಟ್ರೋಲ್ ಯುನಿಟ್ ಮತ್ತು ೩೨೯ ವಿವಿಪ್ಯಾಟ್ ಮತಯಂತ್ರಗಳು ಇರಿಸಲಾಗಿದೆ ಎಂದರು.

ಪಾರದರ್ಶಕ ಚುನಾವಣೆಗೆ ಎಲ್ಲ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ತಪ್ಪದೆ ಮತದಾನ ಮಾಡಿ

ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ, ಅರೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಿರುವುದರಿಂದ ಪ್ರತಿಯೊಬ್ಬರೂ ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕು. ಸಂಡೂರು ಭಾಗದಲ್ಲಿ ಹೆಚ್ಚು ಕೈಗಾರಿಕಾ ವಲಯ ಇರುವುದರಿಂದ ಎಲ್ಲ ಕಾರ್ಮಿಕರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ

ಮತದಾನ ಪ್ರಕ್ರಿಯೆ ಮುಗಿದ ನಂತರ ಸಂಡೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಯಂತ್ರಗಳ ಡಿ-ಮಸ್ಟರಿಂಗ್ ಕಾರ್ಯ ನಡೆಸಲಾಗುವುದು. ಬಳಿಕ ಮತಯಂತ್ರಗಳನ್ನು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಸ್ಥಳಾಂತರಿಸಲಾಗುವುದು. ಅಲ್ಲಿ ನ. ೨೩ರಂದು ಮತದಾನ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭರಾಣಿ ವಿ.ಜೆ. ಅವರು ಮಾತನಾಡಿ, ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಸುಮಾರು ೧೦೩೬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಬಂದೋಬಸ್ತ್‌ಗಾಗಿ ೬೭೬ ಸಿವಿಲ್ ಪೊಲೀಸ್, ಮೂವರು ಡಿವೈಎಸ್ಪಿಗಳು, ೬ ಇನ್‌ಸ್ಪೆಕ್ಟರ್‌ಗಳು, ೧೪ ಪಿಎಸ್‌ಐಗಳು, ೨೨ ಎಎಸ್‌ಐ, ೧೯೦ ಹೆಚ್‌ಸಿ, ೩೮೧ ಕಾನ್ಸ್‌ಟೇಬಲ್, ೧೬೦ ಗೃಹರಕ್ಷಕರು, ೩೬೦ ಕೆಎಸ್‌ಆರ್‌ಪಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಒಟ್ಟು ೧೦೩೬ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಹಣ ವಾಹನ ಜಪ್ತಿ

೧೨೭ ಮತಗಟ್ಟೆ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಸೌಲಭ್ಯ ಮಾಡಲಾಗಿದೆ. ನ. ೧ರಿಂದ ಇಲ್ಲಿ ವರೆಗೆ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ₹೩೪,೧೫,೫೯೮ ನಗದು ಜಪ್ತಿ ಮಾಡಲಾಗಿದೆ. ಹಾಗೆಯೇ ₹೯,೪೯,೫೩೭ ಮೌಲ್ಯದ ೨೯೨೩.೯೭೦ ಲೀ. ಮದ್ಯ ಜಪ್ತು ಮಾಡಿದ್ದು, ಒಟ್ಟು ೧೩೫ ಪ್ರಕರಣ ದಾಖಲಿಸಿಕೊಂಡು ೧೧೬ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ೬ ದ್ವಿಚಕ್ರ ವಾಹನ, ೧ ಲಾರಿ, ೧ ಕಾರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಅಡಿ ಮೂರು ಪ್ರಕರಣ ದಾಖಲಾಗಿದ್ದು, ಕಾರು ಮತ್ತು ಕ್ರೇನ್ ವಾಹನ ಜಪ್ತು ಮಾಡಲಾಗಿದೆ. ಸಿ-ವಿಜಿಲ್ ತಂತ್ರಾಂಶದಲ್ಲಿ ೨೦ ದೂರು ದಾಖಲಾಗಿದ್ದು, ಇತ್ಯರ್ಥ ಮಾಡಲಾಗಿದೆ ಎಂದರು.

ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೨ ಸಖಿ ಬೂತ್‌ಗಳು, ೧ ವಿಶೇಷ ಚೇತನ ಮತಗಟ್ಟೆ, ೧ ಯುವ ಮತದಾರರ ಸ್ಥಾಪಿಸಲಾಗಿದೆ. ಸಂಡೂರು ಕ್ಷೇತ್ರದ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೇಕಡಾವಾರು ಮತದಾನ ಹೆಚ್ಚಳಕ್ಕೆ ಶ್ರಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಚುನಾವಣಾಧಿಕಾರಿ ರಾಜೇಶ್ ಎಚ್.ಡಿ., ತಹಸೀಲ್ದಾರ್ ಜಿ. ಅನಿಲ್ ಕುಮಾರ್, ತಾಪಂ ಇಒ ಎಚ್. ಷಡಕ್ಷರಯ್ಯ ಇದ್ದರು.

Share this article