ಹಿರಿಯೂರು: ಲೋಕಸಭಾ ಚುನಾವಣೆ ಪ್ರಯುಕ್ತ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸುವ್ಯವಸ್ಥೆ ಹಾಗೂ ಶಾಂತಿಯುತ ಮತದಾನ ನಡೆಸುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶಿವೇಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಗಮ ಮತದಾನದ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಒಟ್ಟು 287 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಪಿಆರ್‌ಓ, ಎಪಿಆರ್‌ಓ, 1ನೇ ಪಿಓ, 2ನೇ ಪಿಓ, ಮೈಕೋ ಅಬ್ಸರ್ವರ್ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಸೇರಿದಂತೆ 287 ಪಿಆರ್‌ಓ, 287 ಎಪಿಆರ್‌ಓ, 574 ಪಿಓ ಸೇರಿದಂತೆ ಒಟ್ಟು 1148 ಸಿಬ್ಬಂದಿ ನೇಮಿಸಲಾಗಿದೆ. ಇವಿಎಂ ಹಾಗೂ ವಿವಿಪ್ಯಾಡ್ ಬಗ್ಗೆ ಸೂಕ್ತ ಕ್ರಮನಿರ್ವಹಿಸಲು ಒಬ್ಬ ಪೊಲೀಸ್ ಅಂಗರಕ್ಷಕರೊಂದಿಗೆ 28 ಸೆಕ್ಟರ್ ಅಧಿಕಾರಿಗಳು ಹಾಗೂ 72 ಮೈಕ್ರೋ ಅಬ್ಸರ್ವರ್ಸ್ ನೇಮಿಸಲಾಗಿದೆ. 43 ಪಿಆರ್‌ಓ, 43 ಎಪಿಆರ್‌ಓ, 83 ಪಿಓ ಸಿಬ್ಬಂದಿ ಕಾಯ್ದಿರಿಸಿದೆ. ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ಕರೆದೊಯ್ಯಲು 46 ಸರ್ಕಾರಿ ಬಸ್ ಹಾಗೂ 4 ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ.ವಿಶೇಷ ಮತಗಟ್ಟೆಗಳು: ಕ್ಷೇತ್ರದಲ್ಲಿ ಮತಗಟ್ಟೆ ಸಂಖ್ಯೆ 173, ಅಸೆಂಬ್ಲಿ ಕಾನ್ಸ್‌ಟಿಟ್ಯೂಎನ್ಸಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನೆಹರು ಮೈದಾನ-2, ಮತಗಟ್ಟೆ ಸಂಖ್ಯೆ 65 ಸರ್ಕಾರಿ ಪದವಿ ಪೂರ್ವ ಕಾಲೇಜು ಹರಿಯಬ್ಬೆ-3, ಮತಗಟ್ಟೆ ಸಂಖ್ಯೆ 15 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಬುರುಜಿನರೊಪ್ಪ-1, ಮತಗಟ್ಟೆ ಸಂಖ್ಯೆ 125 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬಬ್ಬೂರು-1, ಹಾಗೂ ಮತಗಟ್ಟೆ ಸಂಖ್ಯೆ 259 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಜವನಗೊಂಡನಹಳ್ಳಿ-3 ಸೇರಿದಂತೆ 5 ಸಖಿ ಮತಗಟ್ಟೆ ರಚಿಸಲಾಗಿದೆ. ವಿಶೇಷ ಚೇತನರು ಮತದಾನ ಮಾಡಲು ಮತಗಟ್ಟೆ ಸಂಖ್ಯೆ 210 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೂನಿಕೆರೆ-1 ಹಾಗೂ ಯುವಜನ ನಿರ್ವಹಣೆಗೆ ಮತಗಟ್ಟೆ ಸಂಖ್ಯೆ 86 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಂಬಲಗೆರೆಯಲ್ಲಿ 1 ಸ್ಥಾಪಿಸಲಾಗಿದೆ.
ಮತದಾನ ವೀಕ್ಷಣೆಗಾಗಿ 158 ಮತಗಟ್ಟೆಗಳಲ್ಲಿ ಸಿಸಿಟಿವಿ, ವೆಬ್‌ಕಾಸ್ಟಿಂಗ್ ಅಳವಡಿಸಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಮೂಲಭೂತ ಸೌಲಭ್ಯ, ಶುದ್ಧ ಕುಡಿಯುವ ನೀರಿನ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿ ತಂಡ ನೇಮಿಸಲಾಗಿದೆ. ಎಲ್ಲಾ ಚುನಾವಣಾ ಕರ್ತವ್ಯ ಸಿಬ್ಬಂದಿಗೆ ಅಕ್ಷರ ದಾಸೋಹವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾ ದೃಷ್ಟಿಯಿಂದ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ಷೇತ್ರದಲ್ಲಿ ಸೂಕ್ತ ಪೊಲೀಸ್ ವ್ಯವಸ್ಥೆ ಕೈಗೊಂಡಿದ್ದು 561 ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ರಾಜೇಶ್ ಕುಮಾರ್, ಚುನಾವಣಾ ಶಿರಸ್ತೇದಾರ್ ಎಂ.ಬಿ.ಮೋಹನ್, ಇಓ ಸತೀಶ್ ಕುಮಾರ್, ಬಿಇಓ ತಿಪ್ಪೇಸ್ವಾಮಿ, ಪೌರಾಯುಕ್ತ ಶ್ರೀನಿವಾಸ್ ಜಾದವ್, ಸಿಡಿಪಿಓ ರಾಘವೇಂದ್ರ, ಆರ್.ನಾಗರಾಜ್ ಸೇರಿದಂತೆ ಇತರೆ ಚುನಾವಣಾ ಅಧಿಕಾರಿಗಳು ಹಾಜರಿದ್ದರು.