ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಸಕ್ತ 2024 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ 9 ಜಿಲ್ಲೆಯಲ್ಲಿ ಉಂಡೆ ಕೊಬ್ಬರಿ ಖರೀದಿ ಪ್ರಕಿಯೆ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.ಮಾ.9 ಕ್ಕೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಅಂತ್ಯವಾಗಿದ್ದು 9 ಜಿಲ್ಲೆಯಿಂದ 58,893 ರೈತರು ನೋಂದಣಿ ಮಾಡಿಸಿದ್ದಾರೆ. ಈ ರೈತರಿಗೆ ಜೇಷ್ಠತೆ ಆಧಾರದಲ್ಲಿ ಖರೀದಿ ಮಾಹಿತಿ ನೀಡಿ ಖರೀದಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.ಕೊಬ್ಬರಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಿಸಿದ್ದು ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಯಲ್ಲಿ ಮಾರಾಟ ಮಂಡಳಿಯಿಂದ ಹಾಗೂ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ರಾಮನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಸಂಸ್ಥೆಯಾಗಿ ನೇಮಿಸಲಾಗಿದೆ.ಕೊಬ್ಬರಿ ಖರೀದಿಗೆ ಅಗತ್ಯವಾದ ಪರಿಕರ, ಸಾರಿಗೆ, ಹಸ್ತಾಂತರ ವ್ಯವಸ್ಥೆ, ಗೋಣಿಚೀಲಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಅಚ್ಚುಕಟ್ಟಾಗಿ ಖರೀದಿ ಪ್ರಕ್ರಿಯೆ ಮುಗಿಸಬೇಕು ಎಂದು ಸಂಬಂಧಪಟ್ಟವರಿಗೆ ಕೃಷಿ ಮಾರಾಟ ಮಂಡಳಿಯು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಅಕ್ರಮ ಬಯಲಾಗಿತ್ತುಈ ಹಿಂದೆ ಫೆ.5 ಕ್ಕೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿ ಫೆ.9 ರ ಮಧ್ಯಾಹ್ನವೇ 6.25 ಲಕ್ಷ ಕ್ವಿಂಟಾಲ್ ಕೊಬ್ಬರಿ ನೋಂದಣಿಯಾಗಿತ್ತು. 9 ಖರೀದಿ ಕೇಂದ್ರಗಳ ಕೆಲ ಅಧಿಕಾರಿಗಳು ಅಕ್ರಮ ನಡೆಸಿ ನೋಂದಣಿ ಪ್ರಕ್ರಿಯೆ ಬೇಗನೇ ಮುಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ವಿಧಾನ ಮಂಡಲ ಅಧಿವೇಶನದಲ್ಲೂ ಈ ವಿಷಯ ಪ್ರತಿಧ್ವನಿಸಿತ್ತು. ಬಳಿಕ ತನಿಖೆ ನಡೆಸಿದಾಗ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿ ಹಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ನಂತರ ಪುನಃ ಹೊಸದಾಗಿ ನೋಂದಣಿ ಮಾಡಲಾಗಿತ್ತು.