ಹಾವೇರಿ: ತುಳಸಿ ಹಾಗೂ ಗೌರಿ ಹುಣ್ಣಿಮೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆ ಮಾಡಲು ನ. 5ರಂದು ಜಿಲ್ಲಾದ್ಯಂತ ಸಿದ್ಧತೆ ಜೋರಾಗಿ ನಡೆದಿದ್ದು, ತಾಲೂಕಿನ ಕರ್ಜಗಿ ಗ್ರಾಮದ ಗೌರಿಮಠದಲ್ಲಿ ವಿಶೇಷವಾಗಿ ಆಚರಿಸಲು ವ್ಯವಸ್ಥೆ ಮಾಡಲಾಗಿದೆ.
ಕರ್ಜಗಿ ಗೌರಿಮಠದಲ್ಲಿ ಗೌರಿ ಹುಣ್ಣಿಮೆ ಹಬ್ಬದ ಆಚರಣೆ ಸಂದರ್ಭದಲ್ಲಿ ಗೌರಿಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಶ್ರದ್ಧಾ ಭಕ್ತಿಯಿಂದ ಗೌರಿಯ ಮೂರ್ತಿಗೆ ಆರತಿ ಬೆಳಗುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಗೌರಿ ಹುಣ್ಣಿಮೆ ಹಬ್ಬದಂದು ಸಂಜೆ ಗ್ರಾಮದ ಮಕ್ಕಳು ಹಾಗೂ ಮಹಿಳೆಯರು ಹಾಡು ಹೇಳುತ್ತಾ ತಂಡತಂಡವಾಗಿ ಗೌರಿಮಠಕ್ಕೆ ಬಂದು ಸಕ್ಕರೆ ಆರತಿ ಬೆಳಗುವ ಪದ್ಧತಿ ನಡೆದುಬಂದಿದೆ. ಕಾರ್ತಿಕ ಮಾಸದಲ್ಲಿ ಬರುವ ಈ ಗೌರಿಹುಣ್ಣಿಮೆ ಹಬ್ಬದಂದು ಶ್ರೀಮಠದಲ್ಲಿ ಪ್ರತಿಷ್ಠಾಪಿಸಲಾದ ಗೌರಿಮೂರ್ತಿಗೆ ಹೂವು, ವಸ್ತ್ರಗಳಿಂದ ಅಲಂಕರಿಸಲಾಗಿರುತ್ತದೆ. ಹೊಸ ಬಟ್ಟೆ ಧರಿಸಿ ಪೂಜಾ ಸಾಮಗ್ರಿಗಳೊಂದಿಗೆ ಮಹಿಳೆಯರು ಮಠಕ್ಕೆ ಆಗಮಿಸಿ ಗೌರಿಗೆ ಅರಿಷಿಣ, ಕುಂಕುಮ ಹಚ್ಚಿ ಹೂವು ಮುಡಿಸಿ ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ. ನಂತರ ಹಣ್ಣು, ಕಾಯಿ, ಸಿಹಿ ಪದಾರ್ಥಗಳನ್ನು ನೈವೇದ್ಯ ಮಾಡಿ ಶ್ರದ್ಧಾಭಕ್ತಿಯಿಂದ ಗೌರಿದೇವಿಗೆ ನಮಿಸುತ್ತಾರೆ. ನಂತರ ನೆರೆಹೊರೆಯವರನ್ನು ಪೂಜೆಗೆ ಕರೆದು ಎಲೆ, ಅಡಿಕೆ, ಹಣ್ಣು, ಅರಿಷಿಣ, ಕುಂಕುಮ ಹಂಚಿಕೊಳ್ಳವುದು ಇಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಹಬ್ಬಕ್ಕೆ ಸಿದ್ಧತೆ: ಗೌರಿ ಹುಣ್ಣಿಮೆ ಆಚರಣೆ ಹಿನ್ನೆಲೆ ನಗರದ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ನಗರದ ಜನತೆ ಹಬ್ಬಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಖರೀದಿ ಜೋರಾಗಿ ನಡೆಯಿತು. ಹಬ್ಬದ ಹಿನ್ನೆಲೆ ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸಕ್ಕರೆ ಗೊಂಬೆ, ದಂಡಿಗಳ ಖರೀದಿಸುತ್ತಿರುವುದು ಕಂಡು ಬಂದಿತು. ವಿವಿಧ ಆಕೃತಿ, ಬಣ್ಣಗಳಿಂದ ಕಂಗೊಳಿಸುತ್ತಿದ್ದ ಸಕ್ಕರೆ ಗೊಂಬೆಗಳು ಮಾರುಕಟ್ಟೆಯಲ್ಲಿ ಆಕರ್ಷಣಿಯವಾಗಿ ಕಂಡು ಬರುತ್ತಿದ್ದವು. ಕೆಂಪು, ಹಳದಿ, ಕೇಸರಿ, ಬಿಳಿ, ಗುಲಾಬಿ, ಹಸಿರು ಬಣ್ಣದಲ್ಲಿ ತಯಾರಿಸಿದ್ದ ಸಕ್ಕರೆ ಗೊಂಬೆಗಳನ್ನು ಜನತೆ ಖರೀದಿಸಿದರು. ಮಕ್ಕಳಿಗಾಗಿ ದಂಡಿ ಹಾಗೂ ಕೋಲಾಟದ ಕೋಲುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು. ಕರ್ಜಗಿ ಗೌರಿಮಠದಲ್ಲಿ ಪ್ರತಿವರ್ಷ ಗೌರಿಹುಣ್ಣಿಮೆ ದಿನದಂದು ಗೌರಿಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಕ್ಕಳಿಲ್ಲದವರು, ಸಂಸಾರಿಕ ಸಮಸ್ಯೆಯಿರುವವರು, ಬದುಕಿನ ಶ್ರೇಯೋಭಿವೃದ್ಧಿ ಸೇರಿದಂತೆ ಇತರೆ ಕಾರಣಗಳ ಪರಿಹಾರಕ್ಕಾಗಿ ಭಕ್ತಾದಿಗಳು, ಗೌರಿಯನ್ನು ಪೂಜಿಸುವುದು ಶ್ರೀಮಠದಲ್ಲಿ ಸಾಂಪ್ರದಾಯವಾಗಿ ನಡೆದುಕೊಂಡು ಬಂದಿದೆ ಎಂದು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು ಹೇಳಿದರು.