ಬೇಸಿಗೆ ನೀರಿನ ಬವಣೆ ಎದುರಿಸಲು ಸಿದ್ಧತೆ ಮುಖ್ಯ

KannadaprabhaNewsNetwork |  
Published : Nov 23, 2026, 01:30 AM IST
22ಕೆಡಿವಿಜಿ1-ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಕ್ಷೇತ್ರದ ಬಾಡ ಗ್ರಾಮದಲ್ಲಿ ಭಾನುವಾರ ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟಿಸಿದ ಸಚಿವ ಕೆ.ಎಸ್.ಬಸವಂತಪ್ಪ. ........................22ಕೆಡಿವಿಜಿ2-ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಕ್ಷೇತ್ರದ ಬಾಡ ಗ್ರಾಮದಲ್ಲಿ ಭಾನುವಾರ ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದ ಸಚಿವ ಕೆ.ಎಸ್.ಬಸವಂತಪ್ಪ. | Kannada Prabha

ಸಾರಾಂಶ

ದಾವಣಗೆರೆ ಮುಂಬರುವ ಬೇಸಿಗೆಯ ಏಳೆಂಟು ತಿಂಗಳಲ್ಲಿ ನೀರಿನ ಅಭಾವದ ಸವಾಲು ಎದುರಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು, ರೈತರು ಈಗಿನಿಂದಲೇ ನೀರಿನ ಮಿತ ಬಳಕೆಗೆ ಗಮನ ಹರಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಮನವಿ ಮಾಡಿದರು.

- ಸಚಿವ ಕೆ.ಎಸ್.ಬಸವಂತಪ್ಪ ಸಲಹೆ । ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಗ್ರಾಣ ಕಟ್ಟಡ ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂಬರುವ ಬೇಸಿಗೆಯ ಏಳೆಂಟು ತಿಂಗಳಲ್ಲಿ ನೀರಿನ ಅಭಾವದ ಸವಾಲು ಎದುರಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು, ರೈತರು ಈಗಿನಿಂದಲೇ ನೀರಿನ ಮಿತ ಬಳಕೆಗೆ ಗಮನ ಹರಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಮನವಿ ಮಾಡಿದರು.

ತಾಲೂಕಿನ ಬಾಡ ಗ್ರಾಮದಲ್ಲಿ ಭಾನುವಾರ ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಬೇಸಿಗೆ ದಿನಗಳನ್ನು ಗಮನದಲ್ಲಿಟ್ಟುಕೊಂಡು, ನೀರಿನ ಹಿತಮಿತ ಬಳಕೆಯತ್ತ ರೈತರು ಸೇರಿದಂತೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು.

ಲಭ್ಯ ನೀರನ್ನೇ ಸಮರ್ಪಕ ನಿರ್ವಹಿಸುವ ಮೂಲಕ ಭವಿಷ್ಯದ ಕುಡಿಯುವ ನೀರಿನ ಸಂಕಷ್ಟ ತಡೆಯಲು ಎಲ್ಲರೂ ಮುಂದಾಗಬೇಕು. ಈಗಾಗಲೇ ಗುಡಾಳ್‌, ಕಂದನಕೋವಿ ಸೇರಿದಂತೆ ತಮ್ಮ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅವಶ್ಯಕತೆಯೂ ಇದೆ ಎಂದು ತಿಳಿಸಿದರು.

ಜನ, ಜಾನುವಾರು, ಸಕಲ ಜೀವರಾಶಿಗಳಿಗೂ ನೀರು ಅತ್ಯಗತ್ಯವಾಗಿದೆ. ಹಾಗಾಗಿ ನೀರಿನ ಮೌಲ್ಯವನ್ನು ಅರಿತು, ಪ್ರತಿಯೊಬ್ಬರೂ ಮಿತ ಬಳಕೆಗೆ ಆದ್ಯತೆ ನೀಡಬೇಕು. ಭದ್ರಾ ಅಚ್ಚುಕಟ್ಟು ಪ್ರದೇಶದಿಂದ ಬೇಸಿಗೆ ಬೆಳೆಗೆ ನೀರು ಬಿಡುವ ಬಗ್ಗೆ ಡಿಸೆಂಬರ್ ಮೊದಲ ವಾರದಲ್ಲಿ ಐಸಿಸಿ ಸಭೆನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಜಿಲ್ಲೆಯ ಎಲ್ಲ ಶಾಸಕರು ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಸಭೆಯಲ್ಲಿ ಬೇಸಿಗೆ ಹಂಗಾಮಿಗೆ ನಾಲೆಗೆ ನೀರು ಬಿಡುವ ದಿನಾಂಕ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

ಭದ್ರಾ ಕಾಲುವೆಗಳಿಗೆ ನೀರು ಹರಿಸಿದಾಗ ರೈತರು ತಮ್ಮ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿಕೊಳ್ಳಲು ಮೊದಲ ಆದ್ಯತೆ ನೀಡಬೇಕು. ಕೆರೆಗಳು ಭರ್ತಿಯಾದರೆ ಮುಂದಿನ 2 ತಿಂಗಳವರೆಗೆ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನಿವಾರಿಸಲು ಸಾಧ್ಯ. ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಬೆಳೆದಿದೆ. ಸಂಘವು ಮಿನಿ ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಆಡಳಿತ ಮಂಡಳಿ, ಸಿಬ್ಬಂದಿ, ಸದಸ್ಯರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಸಂಘ ಬೆಳೆಸುತ್ತಿರುವುದು ಶ್ಲಾಘನೀಯ. ವಿಶೇಷವಾಗಿ 50 ಮಹಿಳೆಯರು ಸಂಘದ ಜವಾಬ್ದಾರಿ ಹೊತ್ತು ಠೇವಣಿ ಸಂಗ್ರಹಿಸುವುದರ ಜೊತೆಗೆ ಜನರಿಗೆ ಸಾಲ ಸೌಲಭ್ಯ ಕಲ್ಪಿಸುವಲ್ಲಿ ತೊಡಗಿರುವುದು ಇತರರಿಗೂ ಪ್ರೇರಣೆಯಾಗಿದೆ. ಸಂಘವು ಗ್ರಾಮದ ಕಟ್ಟಕಡೆಯ ವ್ಯಕ್ತಿ, ಆರ್ಥಿಕವಾಗಿ ಹಿಂದುಳಿದವರಿಗೂ ಆರ್ಥಿಕ ನೆರವು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಶಕ್ತಿಯಾಗಬೇಕು ಎಂದು ಸಚಿವರು ಸಲಹೆ ನೀಡಿದರು.

ದಿನದಿಂದ ದಿನಕ್ಕೆ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿ ಬಾಡ ಗ್ರಾಮ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಿ, ವ್ಯಾಪಾರ, ಕೃಷಿ ಹಾಗೂ ಸ್ವಉದ್ಯೋಗ ಚಟುವಟಿಕೆಗೆ ಉತ್ತೇಜನ ನೀಡಬೇಕು. ಸಹಕಾರ ಸಂಘಗಳ ಬಲವರ್ಧನೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಿಸಲು ಪ್ರಯತ್ನಿಸುವೆ. ಈ ವರ್ಷ ಬಾಡ ಗ್ರಾಮಕ್ಕೆ 4-5 ಕೋಟಿ ರು. ಅನುದಾನ ಕೋರಿದ್ದಾರೆ. ದೊರೆಯುವ ಅನುದಾನ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಮಾಯಕೊಂಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇವೆ. ಬಾಡ-ಶಂಕರನಹಳ್ಳಿ ಮಾರ್ಗವಾಗಿ ಮಾಯಕೊಂಡಕ್ಕೆ ತೆರಳುವ ರಸ್ತೆ ಡಾಂಬರೀಕರಣ, ಸಿಸಿ ರಸ್ತೆ ಕಾಮಗಾರಿ , ಕಬ್ಬೂರು ರಸ್ತೆ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಿಠಲಾಪುರದಿಂದ ಮಾಯಕೊಂಡ ಗಡಿವರೆಗಿನ ರಸ್ತೆ ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಲಾಗುವುದು. ಸರ್ಕಾರಿ ಶಾಲೆಗಳ ಉನ್ನತೀಕರಣ, ಕ್ಷೇತ್ರಕ್ಕೆ ಕೆಪಿಎಸ್ ಶಾಲೆ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಗ್ರಾಮಗಳ ದೇವಸ್ಥಾನಗಳ ಪಟ್ಟಿ ಸಲ್ಲಿಸಿದರೆ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮೀನುಗಾರಿಕೆ, ಕೆರೆಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಮೂಲ ಸೌಕರ್ಯಗಳಿಗೂ ಆದ್ಯತೆ ನೀಡಲಾಗುವುದು. ರೈತರ ಸಂಕಷ್ಟಗಳಿಗೆ ಸ್ಪಂದಿಸುವುದರ ಜತೆಗೆ ಕ್ಷೇತ್ರದ ಜನರ ಕಷ್ಟ-ಸುಖಗಳಲ್ಲಿ ಸದಾ ಭಾಗಿಯಾಗುತ್ತೇನೆ ಎಂದು ಸಚಿವ ಬಸವಂತಪ್ಪ ಭರವಸೆ ನೀಡಿದರು.

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಜೆ.ಆರ್.ಷಣ್ಮುಖಪ್ಪ, ಉಪಾಧ್ಯಕ್ಷ ಬಿ.ಕುಮಾರ, ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಪ್ರಕಾಶ, ರುದ್ರಸ್ವಾಮಿ, ಬಸವಲಿಂಗಪ್ಪ, ಎಂ.ಡಿ.ಸುರೇಶ, ಸೈಫುಲ್ಲಾ ಖಾನ್, ಎ.ನಾಗರಾಜ್ ಸೇರಿದಂತೆ ಸಹಕಾರ ಕ್ಷೇತ್ರದ ಪ್ರಮುಖರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

- - -

(ಬಾಕ್ಸ್‌)

* ಗ್ರಾಮೀಣರ ನೀರಿನ ಸಮಸ್ಯೆ ನೀಗಿಸದ ಜೆಜೆಎಂ!

- ಜಲಜೀವನ ಮಿಷನ್ ಲೋಪದೋಷ, ಅಧಿಕಾರಿಗಳಿಗೆ ಬಸವಂತಪ್ಪ ಚಾಟಿ

ದಾವಣಗೆರೆ: ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಜಾರಿಗೊಂಡ ಜಲಜೀವನ ಮಿಷನ್‌ (ಜೆಜೆಎಂ) ಯೋಜನೆ ಅನುಷ್ಠಾನದಲ್ಲಿ ಲೋಪದೋಷಗಳು ಕಂಡುಬರುತ್ತಿವೆ, ಇದು ಸರಿಯಲ್ಲ ಎಂದು ಸಚಿವ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದರು.

ತಾಲೂಕಿನ ಬಾಡ ಗ್ರಾಮದಲ್ಲಿ ಭಾನುವಾರ ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ನೇರ್ಲಿಗೆ ಗ್ರಾಮದಲ್ಲಿ ಜೆಜೆಎಂ ಯೋಜನೆ ಉದ್ಘಾಟನೆಯಾಗಿ, ಕಾಮಗಾರಿಗೆ ಪೂರ್ಣ ಪ್ರಮಾಣದ ಹಣ ಪಾವತಿ ಆಗಿದ್ದರೂ ಮನೆಗಳಿಗೆ ಒಂದು ಹನಿ ನೀರು ತಲುಪಿಲ್ಲ. ನೇರ್ಲಿಗೆ ಗ್ರಾಮಸ್ಥರು ನೀರಿಗಾಗಿ ಹಳ್ಳದ ನೀರಿಗೆ ಅವಲಂಭಿಸಿರುವ ಪರಿಸ್ಥಿತಿ ಇರುವುದು ದುರಾದೃಷ್ಟಕರ. ಸಾರ್ವಜನಿಕರ ತೆರಿಗೆ ಹಣವನ್ನು ಇಂತಹ ಯೋಜನೆಗೆ ಬಳಸಿದರೂ ಜನರಿಗೆ ಪ್ರಯೋಜನವಾಗದಿದ್ರೆ ಏನರ್ಥ? ಅಧಿಕಾರಿಗಳು ಇಂತಹ ಲೋಪಗಳು ಗಂಭೀವಾಗಿ ಪರಿಗಣಿಸಿ, ಸರಪಡಿಸಬೇಕು ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮನೆ ಮನೆಗೂ ಶುದ್ಧ ಕುಡಿಯುವ ನೀರು ತಲುಪಿಸಬೇಕೆಂಬ ಸರ್ಕಾರದ ಉದ್ದೇಶ ಸಾಕಾರಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೆ.ಎಸ್‌. ಬಸವಂತಪ್ಪ ಸೂಚ್ಯವಾಗಿ ಹೇಳಿದರು.

- - -

(ಟಾಪ್‌ ಕೋಟ್‌)

ನಾನು ನಿಮ್ಮ ಮನೆಯ ಮಗನಿದ್ದಂತೆ. ಯಾವುದೇ ಯೋಜನೆಯಲ್ಲಿ ಕೊರತೆಯಾದರೂ ಅಥವಾ ನಿಮ್ಮ ಕಷ್ಟ-ಸುಖಗಳ ಸಂದರ್ಭದಲ್ಲಿ ದಿನದ 24 ಗಂಟೆಯೂ ನನಗೆ ಕರೆ ಮಾಡಿದರೆ ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ. ಯಾವುದೇ ಸಮಸ್ಯೆಗಳಿದ್ದರೂ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

- ಕೆ.ಎಸ್‌.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.

- - -

-22ಕೆಡಿವಿಜಿ1: ಬಾಡ ಗ್ರಾಮದಲ್ಲಿ ಭಾನುವಾರ ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡವನ್ನು ಸಚಿವ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. -22ಕೆಡಿವಿಜಿ2: ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ