ಧಾರವಾಡ: ಇನ್ನೊಂದು ವಾರದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಆಗಲಿದ್ದು, ಈ ಕ್ಷಣಕ್ಕಾಗಿ ಇಡೀ ದೇಶದ ಜನರು ಕಾತುರದಿಂದ ಕಾಯುತ್ತಿದ್ದಾರೆ. ಈ ಸುಸಂದರ್ಭದಲ್ಲಿ ಪ್ರತಿಯೊಬ್ಬ ರಾಮ ಭಕ್ತರ ಮನೆ ಮೇಲೆ ಶ್ರೀರಾಮ ಮತ್ತು ಹನುಮಂತನ ಭಾವಚಿತ್ರ ಇರುವ ಧ್ವಜಗಳು ಹಾರಾಡಲೆಂದು ಧಾರವಾಡದಲ್ಲಿ ಅಸಂಖ್ಯಾತ ಧ್ವಜಗಳು ಸಿದ್ಧವಾಗುತ್ತಿವೆ.
ಇಲ್ಲಿಯ ಮರಾಠಾ ಗಲ್ಲಿಯಲ್ಲಿರುವ ಪ್ರತೀಶ್ ಜಾಧವ ಎಂಬುವರು ವಿಶೇಷ ವಿನ್ಯಾಸದ ಧ್ವಜಗಳನ್ನು ತಯಾರಿಸುತ್ತಿದ್ದಾರೆ. ಶ್ರೀರಾಮ ಮತ್ತು ಹನುಮಂತ ಇರುವ ಮೂರು ಲಕ್ಷ ಧ್ವಜಗಳನ್ನು ಸಿದ್ಧಪಡಿಸುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ ಎಂದಿದ್ದಾರೆ. ಕಳೆದ 15 ದಿನಗಳಿಂದ ಪ್ರತೀಶ್ ಹಾಗೂ ಅವರ ತಂಡ ಧ್ವಜ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ಒಂದೂವರೆ ಲಕ್ಷ ಧ್ವಜ ಇಲ್ಲಿಂದ ಬೇರೆ ಬೇರೆ ಕಡೆಗಳಲ್ಲಿ ರವಾನೆ ಕೂಡಾ ಆಗಿವೆ. ಹಗಲು-ರಾತ್ರಿ ಎನ್ನದೇ ಕೆಲಸ ಮಾಡುತ್ತಿರುವ ರಾಮನ ಭಕ್ತರು ಎಷ್ಟು ಸಾಧ್ಯವೋ ಅಷ್ಟು ರಾಮನ ಧ್ವಜ ತಯಾರು ಮಾಡಿ ಬೇಡಿಕೆ ಬಂದಲ್ಲಿ ಕಳುಹಿಸುವಲ್ಲಿ ನಿರತರಾಗಿದ್ದಾರೆ. ಮೊದಲಿನಿಂದಲೂ ಧ್ವಜ ತಯಾರಿಕೆಯಲ್ಲಿ ತೊಡಗಿರುವ ಜಾಧವ ಅವರಿಗೆ ಈ ಬಾರಿ ಬಂಪರ್ ಆರ್ಡರ್ ಬಂದಿದೆ. ಕೇಂದ್ರ ಸಚಿವ ಹಾಗೂ ಧಾರವಾಡದ ಸಂಸದ ಪ್ರಲ್ಹಾದ ಜೋಶಿ ಅವರೇ ಒಂದು ಲಕ್ಷ ಧ್ವಜಗಳಿಗೆ ಆರ್ಡರ್ ಮಾಡಿದ್ದಾರೆ.ಸ್ಥಳೀಯ ಬೇಡಿಕೆಯ ಜೊತೆಗೆ ಶ್ರೀರಾಮನ ಧ್ವಜಗಳ ತಯಾರಿಸಲು ದೂರದ ಗೋವಾ, ತೆಲಂಗಾಣ, ಆಂಧ್ರಪ್ರದೇಶದ ರಾಮನ ಭಕ್ತರಿಂದ ಬೇಡಿಕೆ ಬಂದಿದೆ. ರಾಮನ ಭಕ್ತರಾಗಿರುವ ನಾನು ಧ್ವಜಗಳ ದರವನ್ನು ತಕ್ಕ ಮಟ್ಟಿಗೆ ನಿಗದಿ ಮಾಡಿದ್ದೇನೆ. ನಾಲ್ಕು ಅಡಿಯ ಧ್ವಜದಿಂದ ಐದು ಮೀಟರ್ ಧ್ವಜಗಳು ತಯಾರಾಗುತ್ತಿವೆ. ₹5ರಿಂದ ₹300ರ ಬಟ್ಟೆಯ ಗುಣಮಟ್ಟದ ಮೇಲೆ ಧ್ವಜದ ದರಗಳನ್ನು ನಿಗದಿಪಡಿಸಲಾಗಿದೆ. ನಿತ್ಯವೂ ಸುಮಾರು 80 ಜನರು ಹಗಲು-ರಾತ್ರಿ ಕೆಲಸ ಮಾಡಿ ಈ ಧ್ವಜಗಳನ್ನು ತಯಾರಿಸುತ್ತಿದ್ದಾರೆ. ಪ್ರತಿದಿನ ಓರ್ವ ಎರಡು ಸಾವಿರಕ್ಕೂ ಹೆಚ್ಚು ಧ್ವಜ ತಯಾರು ಮಾಡುತ್ತಿದ್ದಾನೆ ಎಂದು ಪ್ರತೀಶ ಜಾಧವ ಮಾಹಿತಿ ನೀಡಿದರು.
ಜ. 22ರಂದು ಪ್ರತಿ ಮನೆಯಲ್ಲಿ ದೀಪ ಹಚ್ಚಿ ಸಂಭ್ರಮಿಸುವ ಜೊತೆಗೆ ರಾಮನ ಧ್ವಜಗಳನ್ನು ಹಾರಿಸುವ ಯೋಜನೆ ಇದಾಗಿದ್ದು, ರಾಮ ಮಂದಿರದ ಉದ್ಘಾಟನೆಗೆ ಮತ್ತಷ್ಟು ಕಳೆ ಬರಲಿದೆ.