ಚನ್ನಭೈರಾದೇವಿ ಕುರಿತ ಸಿನಿಮಾ ನಿರ್ಮಿಸಲು ಸಿದ್ಧತೆ

KannadaprabhaNewsNetwork |  
Published : Jun 28, 2026, 02:30 AM IST
ರಾಜೇಂದ್ರಸಿAಗ್ ಬಾಬು ವೀಕ್ಷಿಸಿದರು | Kannada Prabha

ಸಾರಾಂಶ

ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ೫೪ ವರ್ಷಗಳ ಕಾಲ ಅಡಳಿತ ನಡೆಸಿ ಕರಿಮೆಣಸಿನ ರಾಣಿ ಎಂಬ ಪ್ರಖ್ಯಾತಿ ಹೊಂದಿರುವ ಚನ್ನಬೈರಾದೇವಿ ವೈಭವದ ಚರಿತ್ರೆಯ ಸಿನಿಮಾ ನಿರ್ಮಿಸಲು ಕನ್ನಡದ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ

ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ೫೪ ವರ್ಷಗಳ ಕಾಲ ಅಡಳಿತ ನಡೆಸಿ ಕರಿಮೆಣಸಿನ ರಾಣಿ ಎಂಬ ಪ್ರಖ್ಯಾತಿ ಹೊಂದಿರುವ ಚನ್ನಬೈರಾದೇವಿ ವೈಭವದ ಚರಿತ್ರೆಯ ಸಿನಿಮಾ ನಿರ್ಮಿಸಲು ಕನ್ನಡದ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ತಾಲೂಕಿನ ಆವಿನಹಳ್ಳಿ ಸಮೀಪದ ಬಡಗೋಡಿನಲ್ಲಿನ ರಾಣಿ ಚನ್ನಬೈರಾದೇವಿಯ ಸಮಾಧಿ ಮತ್ತು ಸುತ್ತಲಿನ ವಿವಿಧ ಶಿಲಾಶಾಸನಗಳನ್ನು ವೀಕ್ಷಿಸಿ ಚಲನಚಿತ್ರ ನಿರ್ಮಾಣಕ್ಕೆ ಪೂರಕ ವಾತಾವರಣದ ಕುರಿತು ದಾಖಲಿಸಿಕೊಂಡು ಸ್ಥಳಿಯ ನಿವಾಸಿಗಳೊಂದಿಗೆ ಸಮಾಲೋಚಿಸಿದರು.

ಆವಿನಹಳ್ಳಿಯ ಕಲ್ಮಕ್ಕಿ ಅರಣ್ಯದಲ್ಲಿರುವ ಪುರಾತನ ಕೋಟೆ ಕೊತ್ತಲಗಳ ಕುರುಹುಗಳನ್ನು ಪರಿಶೀಲಿಸಿ ಇತಿಹಾಸದ ಅವಲೋಕನ ನಡೆಸಿದ ಅವರು ವೀರಗಲ್ಲುಗಳು ಮತ್ತು ಲಿಪಿಗಳಿರುವ ಶಾಸನಗಳ ಅಧ್ಯಯನ ನಡೆಸಿದರು. ಮಹಾಮಂಡಲಾದೀಶ್ವರಿ ಚನ್ನಬೈರಾದೇವಿ ಮಲೆನಾಡು ಮತ್ತು ಕರಾವಳಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ವ್ಯಾಪ್ತಿಯ ಕಾಸರಗೋಡಿನಿಂದ ಹಿಡಿದು ಗೋವಾ ರಾಜ್ಯದವರೆಗೂ ಆಡಳಿತ ವಿಸ್ತರಿಸಿದ್ದಳು. ಕಾಳುಮೆಣಸನ್ನು ವಿದೇಶಕ್ಕೆ ರಪ್ತು ಮಾಡಿ ರಾಜ್ಯದ ಸಂಪತ್ತನ್ನು ಹೆಚ್ಚಿಸಿಕೊಂಡ ಕೀರ್ತಿ ದೇಶ-ವಿದೇಶದಲ್ಲಿ ಮನೆಮಾತಾಗಿತ್ತು ಎಂಬ ಇತಿಹಾಸವನ್ನು ಮೆಲುಕು ಹಾಕಿದರು.

ರಾಣಿ ಚನ್ನಬೈರಾದೇವಿ ಗೇರುಸೊಪ್ಪವನ್ನು ತನ್ನ ಆಡಳಿತ ಕೇಂದ್ರವಾಗಿಟ್ಟುಕೊಂಡು ಭದ್ರತೆಯ ಉದ್ದೇಶದಿಂದ ಗೇರುಸೊಪ್ಪೆಗೆ ತಾಗಿಕೊಂಡಿರುವ ಸಾಗರ ತಾಲೂಕಿನ ಕಾನೂರು ಬೆಟ್ಟದ ತುದಿಯಲ್ಲಿ ಕೋಟೆ ನಿರ್ಮಿಸಿಕೊಂಡದ್ದಳು ಎಂಬ ಕುರುಹುಗಳು ಈಗಲು ಉಳಿದಿರುವುದನ್ನು ಬಾಬು ವೀಕ್ಷಿಸಿದರು.

ಜೈನ ಸಮುದಾಯಕ್ಕೆ ಸೇರಿದ ಚನ್ನಬೈರಾದೇವಿಯ ಚರಿತ್ರೆ ಕುರಿತು ಚಲನಚಿತ್ರ ನಿರ್ಮಾಣಕ್ಕೆ ಹೊಂಬುಜ ಜೈನ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಸೋಂದಾ ಶ್ರೀಮಠದ ಜೈನ ಸ್ವಾಮಿಜಿ, ಮೂಡಬಿದ್ರೆ ಜೈನ ಮಠದ ಶ್ರಿಗಳ ಆಶೀರ್ವಾದ ಪಡೆದಿರುವುದಾಗಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ ಪಡೆಯುವ ಇಂಗಿತ ವ್ಯಕ್ತಪಡಿಸಿದ ಅವರು, ರಾಣಿ ಚನ್ನಬೈರಾದೇವಿಯ ಪುರಾಣ ಪ್ರಸಿದ್ದ ಇತಿಹಾಸ ಮರುಸೃಷ್ಠಿಸುವ ಚಲನಚಿತ್ರ ಮೂಡಿಬರಲಿದೆ ಎಂದರು.

ಜೈನ ಸಮುದಾಯದಲ್ಲಿ ಶವ ದಹನಮಾಡುವ ಪದ್ಧತಿಯಿದ್ದರೂ ಚನ್ನಬೈರಾದೇವಿಯನ್ನು ಕೆಳದಿ ಅರಸರು ಶೈವ ಸಂಪ್ರದಾಯದಂತೆ ಆವಿನಹಳ್ಳಿಯ ಬಡಗೋಡಿನ ಭೂಮಿಯಲ್ಲಿ ಹೂತು ಸಮಾಧಿ ನಿರ್ಮಿಸಿರುವುದನ್ನು ಗಮನಿಸಿದ ಅವರು, ರಾಣಿಯನ್ನು ಕೆಳದಿಯ ಅರಸರು ಸೆರೆ ಹಿಡಿದರೂ ಚನ್ನಭೈರಾದೇವಿ ರಾಜ್ಯದ ಸಂಪತ್ತನ್ನು ಪಟೇಲರ ಸುಪರ್ದಿಯಲ್ಲಿ ಮುಚ್ಚಿಟ್ಟಿದ್ದರಿಂದ ಕೆಳದಿ ಅರಸರಿಗೆ ಯಾವುದೇ ಸಂಪತ್ತು ಸಿಗಲಿಲ್ಲ. ಚಿತ್ರಹಿಂಸೆ ನೀಡಿದರೂ ಬಾಯಿಬಿಡದ ಚನ್ನಬೈರಾದೇವಿ ಮೂರ್ಚೆ ಹೋದಾಗ ರಾಣಿ ಮರಣ ಹೊಂದಿದ್ದಾಳೆಂದು ಸೆರೆಮನೆಯಿಂದ ರುದ್ರಭೂಮಿಗೆ ತಂದು ಜೀವಂತ ಸಮಾಧಿ ನಿರ್ಮಿಸಿರುವುದು ಇತಿಹಾಸದಲ್ಲಿ ಉಲ್ಲೇಖವಾಗಿರುವುದನ್ನು ಗಮನಿಸಿದರು.

ಸಾಗರ ಜೈನ ಸಮುದಾಯದ ಅಧ್ಯಕ್ಷ ಎಸ್.ವಿ.ಹಿತಕರ ಜೈನ್, ಸಹಕಾರ್ಯದರ್ಶಿ ಜಿನದತ್ತ ಜೈನ್ ಕೊರಲಕೈ, ನಿರ್ದೇಶಕ ನೀಲೇಂದ್ರ ಜೈನ್, ಲೋಕರಾಜ್ ಆವಿನಹಳ್ಳಿ, ನೀಲಕುಮಾರ, ರಾಜೇಂದ್ರ ಆವಿನಹಳ್ಳಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡೂರಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ಶಾಸಕ ಕೆ.ಎಸ್. ಆನಂದ್
ನಾಡಪ್ರಭುವಿಗೆ ನಮಿಸಿದ ಮುಖ್ಯಮಂತ್ರಿ ಡಿಕೆಶಿ