
ಕನ್ನಡಪ್ರಭ ವಾರ್ತೆ ಸಿಂಧನೂರು
ಅವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ಸಿಂಧನೂರು ನಗರದ ಬಸ್ ನಿಲ್ದಾಣದ ಎದುರುಗಡೆ ನಿರ್ಮಿಸಿರುವ ಅಕ್ಕ ಕೆಫೆ ಹಾಗೂ ಸಂಜೀವಿನಿ ಇ-ಮಾರ್ಟ್ ಮಳಿಗೆಯನ್ನು ಶನಿವಾರ ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರದ ಶೇ.60 ಮತ್ತು ರಾಜ್ಯ ಸರ್ಕಾರದ ಶೇ.40ರಷ್ಟು ಅನುದಾನದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಅಕ್ಕ ಕೆಫೆ ಆರಂಭಿಸಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಉಪಹಾರ, ಊಟ, ಸ್ನ್ಯಾಕ್ಸ್, ಜ್ಯೂಸ್ ದೊರೆಯುತ್ತವೆ. ಸಾರ್ವಜನಿಕರಿಗೆ ಹೊರೆಯಾಗದಂತೆ ದರವನ್ನು ನಿಗದಿ ಪಡಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ವಿಶೇಷ ಅನುದಾನ ರು.16 ಲಕ್ಷದಲ್ಲಿ ಈ ಮಳಿಗೆಯ ಕಟ್ಟಡವನ್ನು ನಿರ್ಮಿಸಲಾಗಿದೆ. ರು.15 ಲಕ್ಷ ಅನುದಾನವನ್ನು ಇಂಟೀರಿಯಲ್ ಡಿಸೈನ್, ವಿದ್ಯುತ್, ಫರ್ನಿಚರ್, ಚೇರ್, ಟೇಬಲ್, ಸುಣ್ಣ-ಬಣ್ಣ ಬಳಿಯಲು ಖರ್ಚು ಮಾಡಿದ್ದಾರೆ. ಅಡುಗೆ ಸಾಮಗ್ರಿ, ಪ್ಲೇಟ್, ಗ್ಲಾಸ್ ಮತ್ತಿತರ ವಸ್ತುಗಳನ್ನು ಸ್ವಸಹಾಯ ಸಂಘದಿಂದ ಖರೀದಿಸಿದ್ದಾರೆ. ಆರ್.ಎಚ್.ನಂ.1 ಕ್ಯಾಂಪಿನ ಜ್ಞಾನ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧೀನಕ್ಕೆ ಒಳಪಡುವ ದೇವಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ಅಕ್ಕ ಕೆಫೆ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಎಂದು ವಿವರಿಸಿದರು.ಅಕ್ಕ ಕೆಫೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಮತ್ತು ಜ್ಯೋತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ಉಮಲೂಟಿ ಸಂಯುಕ್ತಾಶ್ರಯದಲ್ಲಿ ಸಂಜೀವಿನಿ ಇ-ಮಾರ್ಟ್ ಕೇಂದ್ರ ಉದ್ಘಾಟಿಸಲಾಗಿದೆ. ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿರುವ 30 ಸ್ವಸಹಾಯ ಗ್ರಾಮ ಪಂಚಾಯಿತಿಗಳ ಒಕ್ಕೂಟಗಳು ತಯಾರಿಸಲ್ಪಟ್ಟ ಉತ್ಪನ್ನಗಳನ್ನು ಇದರಲ್ಲಿ ತಂದು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.