ಮಲೆ ಮಹದೇಶ್ವರ ಬೆಟ್ಟ ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಲು ತೀರ್ಮಾನ । ಅರಣ್ಯ ಇಲಾಖೆಯಿಂದ ಕ್ರಮ । ಜನರಲ್ಲಿ ಪ್ಲಾಸ್ಟಿಕ್ ನಿಷೇಧ ಜಾಗೃತಿ
ಕನ್ನಡಪ್ರಭ ವಾರ್ತೆ ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಲು ತಾಳ ಬೆಟ್ಟದಲ್ಲಿ ಅರಣ್ಯ ಇಲಾಖೆ ವತಿಯಿಂದ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ತಯಾರಿ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಲವಾರು ವರ್ಷಗಳಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಹಲವಾರು ಮಾರ್ಗಗಳಲ್ಲಿ ಭಕ್ತರಿಗೆ ಅರಿವು ಮೂಡಿಸಿ, ಬರುವಂತ ಭಕ್ತರಿಗೆ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಿದ್ದರೂ ಸಹ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತೊಂದು ಹೆಜ್ಜೆ ಇಟ್ಟು ಅರಣ್ಯ ಇಲಾಖೆ ಮುಖಾಂತರ ತಾಳಬೆಟ್ಟದಲ್ಲಿ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿದೆ.ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಅವರ ಆದೇಶದ ಅನ್ವಯ ಅರಣ್ಯ ಇಲಾಖೆ ತಾಳಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಸದ್ದಿಲ್ಲದೆ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿದೆ. ಪ್ಲಾಸ್ಟಿಕ್ ಮುಕ್ತಗೊಳಿಸಲು ಚೆಕ್‌ಪೋಸ್ಟ್ ತೆರೆದರೆ ಒಳ್ಳೆಯದು ಟೋಲ್ ನಿರ್ಮಾಣ ಮಾಡಿದರೆ ಮಾದಪ್ಪನ ಭಕ್ತರಿಂದ ಪ್ರಜ್ಞಾವಂತ ನಾಗರಿಕರಿಂದ ಭಾರಿ ವಿರೋಧ ವ್ಯಕ್ತವಾಗಲಿದೆ. 15 ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಚೆಕ್‌ಪೋಸ್ಟ್‌ಗಳಿದ್ದರೆ ಮಾದಪ್ಪನ ಭಕ್ತರಿಗೆ ಹೊರೆಯಾಗುತ್ತದೆ. ಲಕ್ಷಾಂತರ ಭಕ್ತರು ಬರುವ ಈ ಕ್ಷೇತ್ರದಲ್ಲಿ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಈಗಾಗಲೇ ಚೆಕ್‌ಪೋಸ್ಟ್ ನಿರ್ಮಾಣ ಮಾಡಿ ಬರುವಂತಹ ವಾಹನಗಳಿಗೆ ಟೋಲ್ ನಿಗದಿ ಮಾಡಲಾಗಿದೆ. ಆದರೆ ತಾಳಬೆಟ್ಟದಲ್ಲಿ ನಿರ್ಮಾಣ ಮಾಡುತ್ತಿರುವ ತಪಾಸಣಾ ಚೆಕ್‌ಪೋಸ್ಟ್ ನೆಪದಲ್ಲಿ ಟೋಲ್ ಸಂಗ್ರಹಿಸಿದರೆ ಭಾರಿ ವಿರೋಧ ಎದುರಿಸಬೇಕಾಗುತ್ತದೆ.
ಪ್ಲಾಸ್ಟಿಕ್ ಮುಕ್ತ, ಕಠಿಣ ಕ್ರಮ
ತಾಳಬೆಟ್ಟದವರೆಗೆ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಇದ್ದು, ತಾಳಬೆಟ್ಟದಲ್ಲಿ ಅರಣ್ಯ ಇಲಾಖೆ ಟೋಲ್ ನಿರ್ಮಾಣ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು.
ಹನೂರು ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ತಾಳ ಬೆಟ್ಟದಲ್ಲಿ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಮುಂದಾಗಿರುವ ಅರಣ್ಯ ಇಲಾಖೆ.