ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯ ಶಾಸಕರು, ಸಚಿವರು ಸೇರಿ ಜನಪ್ರತಿನಿಧಿಗಳು, ಎಲ್ಲ ಧರ್ಮಗುರುಗಳು ಹೋರಾಟದಲ್ಲಿ ಪಾಲ್ಗೊಂಡು, ನಾವು ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಾಪಿಸಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬಳಿಕವೂ ಕಾರ್ಖಾನೆ ಸ್ಥಾಪಿಸುವ ಕಾಮಗಾರಿ ಭರದಿಂದ ಸಾಗಿದೆ.
ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಹೊಂದಿಕೊಂಡೇ ಈಗಾಗಲೇ 1080 ಎಕರೆ ಭೂಮಿ ಸ್ವಾಧೀನ ಮಾಡಿಕೊಂಡು, ಅದಕ್ಕೆ ಸುತ್ತಲೂ ಕಾಂಪೌಂಡ್ ಹಾಕಿರುವ ಬಿಎಸ್‌ಪಿಎಲ್, ಹೋರಾಟದ ಬಳಿಕ ಕಾಮಗಾರಿಯನ್ನು ತೀವ್ರಗೊಳಿಸಿದೆ. ಹಗಲು-ರಾತ್ರಿಯೂ ಕಾಮಗಾರಿ ನಡೆಯುತ್ತಿದ್ದು, ಕೊಪ್ಪಳ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.ಕಾರ್ಖಾನೆ ವಿರುದ್ಧ ಹೋರಾಟ ನಡೆದಿರುವುದಕ್ಕೆ ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆ ಬಿಎಸ್‌ಪಿಎಲ್ ಕಾರ್ಖಾನೆ ನೀಡಲ್ಲ. ಆದರೆ, ಹೋರಾಟದ ಮುನ್ನಾ ದಿನ ಬಿಎಸ್‌ಪಿಎಲ್ ಕಾರ್ಖಾನೆ ವಾಟ್ಸಾಪ್ ಗ್ರೂಪ್ ರಚನೆ ಮಾಡಿ, ಅದರ ಮೂಲಕ ಹೇಳಿಕೆಯೊಂದನ್ನು ನೀಡಿದೆ. ಬಿಎಸ್‌ಪಿಎಲ್ ಕಾರ್ಖಾನೆಯನ್ನು ಸ್ಥಾಪಿಸುವಂತೆ ಅನೇಕ ಸಂಘಟನೆಗಳು ಬೆಂಬಲಿಸಿವೆ ಎನ್ನುವ ಒಕ್ಕಣಿಕೆ ಇರುವ ಪತ್ರಿಕಾ ಪ್ರಕಟಣೆಯಲ್ಲಿ ಕೆಲವೊಂದು ಸಂಘಟನೆಗಳ ಮನವಿ ಪತ್ರಗಳು ಇವೆ. ಅಲ್ಲದೆ ಕಾರ್ಖಾನೆಯ ಸ್ಥಾಪನೆಯಿಂದ ಸ್ಥಳೀಯವಾಗಿ ಉದ್ಯೋಗ ದೊರೆಯುತ್ತವೆ ಎನ್ನುವ ಮಾಹಿತಿಯನ್ನು ನೀಡಿದೆ.
ಇದಲ್ಲದೆ ಕಾರ್ಖಾನೆ ಸ್ಥಾಪನೆಗೆ ಭೂ ಸ್ವಾಧೀನ ಮಾಡಿಕೊಂಡಾಗ ವಿರೋಧಿಸಿದ ರೈತರು ಇದುವರೆಗೂ ತಮ್ಮ ಭೂಮಿಗೆ ಪರಿಹಾರದ ಹಣ ಪಡೆದುಕೊಂಡಿಲ್ಲ. 175 ಎಕರೆ ಭೂಮಿಗೆ ಸಂಬಂಧಿಸಿದಂತೆ ಅನೇಕ ರೈತರು ಈಗಲೂ ಕಾರ್ಖಾನೆ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ.