ಶಂಕರ ಜಿ. ಜಾವೂರ ಶಿರಸಿ: ಗಣೇಶ ಚತುರ್ಥಿ ಹಬ್ಬಕ್ಕೆ ಕೆಲವು ದಿನಗಳು ಬಾಕಿ ಇದ್ದು, ಹಬ್ಬದ ಸಂಭ್ರಮಕ್ಕೆ ನಗರದ ಎಲ್ಲೆಡೆ ಸಾರ್ವಜನಿಕ ಮಂಡಳಿಗಳು, ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕರು ಭರದಿಂದ ಸಿದ್ಧತೆಯನ್ನು ನಡೆಸಿದ್ದಾರೆ. ಈ ನಡುವೆ ಬೆಲೆ ಏರಿಕೆ ಬಿಸಿ ಜನರ ಜೇಬಿಗೆ ಕತ್ತರಿ ಹಾಕಿದೆ.ಗಣೇಶ ಚತುರ್ಥಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚಿನ ಹಬ್ಬವಾಗಿದೆ. ಮನೆ ಮನೆಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸುವುದು ವಾಡಿಕೆ. ಈ ಸಂದರ್ಭದಲ್ಲಿ ನೈವೇದ್ಯಕ್ಕಾಗಿ ಗಣೇಶನಿಗೆ ಇಷ್ಟವಾದ ಸಿಹಿ ತಿನಿಸುಗಳ ಖಾದ್ಯಗಳನ್ನು ತಯಾರಿಸಿಸಲು ಅಗತ್ಯವಾಗಿ ಬೇಕಾದ ಕಡಲೆ ಬೇಳೆ, ಬೆಲ್ಲ, ಸಕ್ಕರೆ, ಶೇಂಗಾ, ಎಣ್ಣೆ ಬೆಲೆ ಹೆಚ್ಚಾಗಿದ್ದು, ಗಣೇಶ ಹಬ್ಬವನ್ನು ಆಚರಿಸುವುದು ಹೇಗೆ ಎಂದು ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.ಕಳೆದ ವರ್ಷಕ್ಕಿಂತ ಈ ಬಾರಿ ದಿನಸಿ ಸಾಮಗ್ರಿಗಳಿಂದ ಹಿಡಿದು ಗಣೇಶ ಮೂರ್ತಿಗಳವರೆಗೆ ಹಲವು ವಸ್ತುಗಳ ದರ ದಿಢೀರನೆ ಏರಿಕೆಯಾಗಿರುವುದರಿಂದ ಬಡವರಿಗೆ ಹಬ್ಬವನ್ನು ಆಚರಿಸುವುದು ಕಷ್ಟಸಾಧ್ಯ. ಬೆಲೆ ಏರಿಕೆ ನಡುವೆಯೂ ಸಂಪ್ರದಾಯದ ಪ್ರಕಾರ ಭಕ್ತಿಪೂರ್ವಕವಾಗಿ ಸಾರ್ವಜನಿಕರು ಹಬ್ಬ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.ಕಳೆದ 2 ತಿಂಗಳಲ್ಲಿ ದಿನಸಿ ಸಾಮಾನುಗಳ ಬೆಲೆಯಲ್ಲಿ ಸಾಕಷ್ಟು ಏರಳಿತದಿಂದ ಕೂಡಿದ್ದು, ಬಡವರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಈ ಮೊದಲು ಸಕ್ಕರೆ ಕೆಜಿಗೆ ₹42 ಇತ್ತು. ಇದೀಗ ಸಕ್ಕರೆ ಬೆಲೆ ಕೆಜಿಗೆ ₹60 ಇದೆ. ಸಹಜವಾಗಿಯೇ ಬೆಲ್ಲ, ಕಡಲೆ ಬೇಳೆ ಮತ್ತು ಎಣ್ಣೆ ಬೆಲೆಯೂ ಏರಿಕೆಯಾಗಿದೆ.
ಇದರ ಜತೆಗೆ ಕಾರ್ಮಿಕರ ಕೂಲಿ, ಸಾಗಣೆ ವೆಚ್ಚ ಹಾಗೂ ಇತರ ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವುದರಿಂದ ಮೂರ್ತಿಗಳ ದರ ಏರಿಕೆ ಅನಿವಾರ್ಯವಾಗಿದೆ ಎಂದು ಮೂರ್ತಿ ತಯಾರಕರು ಹಾಗೂ ವ್ಯಾಪಾರಿಗಳು ಹೇಳುತ್ತಿದ್ದಾರೆ.ಈ ವರ್ಷ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚಳವಾದ ಕಾರಣ ಗಣೇಶ ಮೂರ್ತಿಗಳ ಬೆಲೆ ಅಲ್ಪ ಹೆಚ್ಚಳ ಮಾಡಲಾಗಿದೆ. ಆದರೂ ಮಾರುಕಟ್ಟೆಯಲ್ಲಿ ಗ್ರಾಹಕರ ಸ್ಪಂದನೆ ಉತ್ತಮವಾಗಿದೆ ಎಂದು ಗಣೇಶ ಮೂರ್ತಿ ತಯಾರಕರಾದ ನಾಗರಾಜ್ ಮಹಾದೇವ್ ಗುಡಿಗಾರ್, ಮರಾಠಿಕೊಪ್ಪ ತಿಳಿಸಿದರು.