ಶಿವಕುಮಾರ ಕುಷ್ಟಗಿ
ರಾಜ್ಯ ಸರ್ಕಾರದ ಬಂಡವಾಳ ವೆಚ್ಚ ಯೋಜನೆಯಡಿ (ಲೆಕ್ಕಶೀರ್ಷಿಕೆ: 4202/03/102/0/03/386) ಫುಟ್‌ಬಾಲ್ ಟರ್ಫ್ ನಿರ್ಮಾಣಕ್ಕೆ ₹386 ಲಕ್ಷ ಹಾಗೂ ಫ್ಲಡ್ ಲೈಟ್ ಅಳವಡಿಕೆಗೆ ₹114 ಲಕ್ಷ ಅನುದಾನ ನಿಗದಿಯಾಗಿದೆ. 2025-26ನೇ ಸಾಲಿನ ಕ್ರೀಡಾ ಇಲಾಖೆಯ ಕ್ರಿಯಾ ಯೋಜನೆಯಡಿ ಶೇ. 25ರಷ್ಟು ಅನುದಾನ ಹಂಚಿಕೆಯೊಂದಿಗೆ ಈ ಕೆಲಸ ಪ್ರಾರಂಭವಾಗಿದೆ. ಆದರೆ, ಇನ್ನೂ ಅಧಿಕೃತವಾಗಿ ಯಾವುದೇ ಭೂಮಿಪೂಜೆ ನೆರವೇರದಿದ್ದರೂ ಕಾಮಗಾರಿಗೆ ಯಾರೂ ತಡೆಯಾಜ್ಞೆ ತರಬಾರದು ಎಂದು ಅಧಿಕಾರಿಗಳೇ ಕೇವಿಯೆಟ್ ದಾಖಲಿಸಿರುವುದು ಹತ್ತಾರು ಪ್ರಶ್ನೆ ಹುಟ್ಟುಹಾಕಿದೆ.
ಮೇಲಧಿಕಾರಿಗಳ ಅನುಮತಿ ಇದೆಯೇ?: ಸಾಮಾನ್ಯವಾಗಿ ಸಾರ್ವಜನಿಕ ಹಿತದೃಷ್ಟಿಯ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ಮುಂಚೂಣಿಯಲ್ಲಿರುತ್ತಾರೆ. ಆದರೆ ಕೋಟ್ಯಂತರ ರುಪಾಯಿ ಮೊತ್ತದ ಈ ಯೋಜನೆಯ ಗೊಂದಲಗಳ ಬಗ್ಗೆ ಸ್ಥಳೀಯ ಶಾಸಕರು ನಿಗೂಢ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತ ಜಿಲ್ಲೆಯಲ್ಲಿ ನೂರಾರು ಸರ್ಕಾರಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದರೂ ತಲೆಕೆಡಿಸಿಕೊಳ್ಳದ ಜಿಲ್ಲಾಧಿಕಾರಿ, ಈ ನಿರ್ದಿಷ್ಟ ಕಾಮಗಾರಿಗೆ ಮಾತ್ರ ಇಷ್ಟೊಂದು ಆತುರ ತೋರುತ್ತಿರುವುದೇಕೆ? ಕೇವಿಯೆಟ್ ಸಲ್ಲಿಸುವ ಮುನ್ನ ಮೇಲಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.ತರಾತುರಿಯಲ್ಲಿ ಕೆವಿಯಟ್: ಸಾಮಾಜಿಕ ಹೋರಾಟಗಾರ ರಾಜು ಖಾನಪ್ಪನವರ ಈ ಕಾಮಗಾರಿ ಅತ್ಯಂತ ಅವೈಜ್ಞಾನಿಕವಾಗಿದೆ ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಸೆ. 9ರಂದು ಜಿಲ್ಲಾ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ, ಸೆ. 7ರ ದಿನಾಂಕ ನಮೂದಿಸಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕೇವಿಯೆಟ್ ಅರ್ಜಿ ಸಲ್ಲಿಕೆಯಾಗಿದೆ. ಸಮಾಜ ಸೇವಕ ಅರವಿಂದ ಹುಲ್ಲೂರ ಅವರನ್ನು ಪ್ರತಿವಾದಿಯನ್ನಾಗಿ ಮಾಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣಪ್ಪ ಗೋಗೇರಿ ಈ ಕೇವಿಯೆಟ್ ದಾಖಲಿಸಿದ್ದು, ಸರ್ಕಾರಿ ವಕೀಲರ ಹೆಸರು ಉಲ್ಲೇಖವಿದ್ದರೂ ಅರ್ಜಿಯಲ್ಲಿ ಯಾರೊಬ್ಬರ ಸಹಿಯೂ ಇಲ್ಲದಿರುವುದು ಕಾನೂನು ವಲಯದಲ್ಲೂ ಹುಬ್ಬೇರಿಸುವಂತೆ ಮಾಡಿದೆ.
ಯಾವುದೇ ಪೂರ್ವ ಮಾಹಿತಿ ಇಲ್ಲದೆ ಏಕಾಏಕಿ ನನ್ನ ಹೆಸರಿಗೆ ಕೇವಿಯೆಟ್ ಹಾಕಿರುವುದು ಆಘಾತ ತಂದಿದೆ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗದಂತೆ ಪ್ರಶ್ನಿಸುವುದು ತಪ್ಪೇ? ಸಹಿ ಇಲ್ಲದ ಕೇವಿಯೆಟ್ ಪ್ರತಿ ರವಾನಿಸಿರುವುದರ ಹಿಂದಿನ ಮರ್ಮವೇನು? ಎಂಬುದು ತನಿಖೆಯಾಗಬೇಕು. ಈ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಮಾಜ ಸೇವಕ ಅರವಿಂದ ಹುಲ್ಲೂರ ಹೇಳಿದರು.