ಅಮರೇಶ್ವರಸ್ವಾಮಿ ಕಂದಗಲ್ಲಮಠ
ಒಣಗಿದ ಹೊಲಗಳು, ಬತ್ತಿದ ಹಳ್ಳ-ಕೆರೆಗಳ ನಡುವೆ ಕುರಿಗಳ ಜತೆ ಹಪಹಪಿಸುತ್ತಿರುವ ಕುರಿಗಾಹಿ ಸೋಮಣ್ಣ ಹೇಳಿದ್ದು ಹೀಗೆ.
ಮುಂಗಾರು ಆರಂಭದಲ್ಲಿ ಅಲ್ಪ ಸ್ವಲ್ಪ ಸುರಿದ ಮಳೆ ಬಿಟ್ಟರೆ, ಮತ್ತೆ ಹೇಳಿಕೊಳ್ಳುವಂತಹ ಮಳೆಯೇ ಆಗಿಲ್ಲ. ಆಗಲೇ ಮುಂಗಾರು ಮುಗಿಯುವ ಹಂತ ತಲುಪಿದೆ. ಆದರೂ ಭೂಮಿ ತಂಪಾಗಿಲ್ಲ. ಮುಂಗಾರು ವೈಫಲ್ಯದಿಂದ ರೈತರು ಬೆಳೆ ಹರಗಿದ್ದಾರೆ. ಉತ್ತಮ ಮಳೆ ಆಗಿದ್ದರೆ ರೈತರು ಫಸಲು ತೆಗೆದುಕೊಂಡ ಮೇಲೆ ಕುರಿಗಾಹಿಗಳು ಜಮೀನುಗಳಲ್ಲಿ ಕುರಿ ಮೇಯಿಸುತ್ತಿದ್ದರು. ಸದ್ಯ ಭೂಮಿ ಬರಡಾಗಿವೆ. ಒಣ ಮಣ್ಣು ಬಿಸಲಿನಿಂದ ಸುಡುತ್ತಿದೆ. ಕುರಿಗಾಹಿಗಳು ಬೇಸತ್ತು ಊರೂರು ತಿರುಗುತ್ತಿದ್ದಾರೆ.ಬರಗಾಲ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಹಾಗೂ ಜಾನುವಾರು ಸಾಕಣೆದಾರರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಗ್ರಾಮೀಣ ಭಾಗದ ಶೇ. 65ಕ್ಕೂ ಹೆಚ್ಚು ಅಲೆಮಾರಿ ಕುರಿಗಾಹಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೀರಿಲ್ಲ, ಹಸಿರಿಲ್ಲ, ಮೇವಿಲ್ಲ. ಸದ್ಯ ಕುರಿಗಾಹಿಗಳಿಗೆ ಡಾಂಬರ್ ರಸ್ತೆ ಬದಿಗಳೇ ಮೇಯಿಸಲು ಇರುವ ತಾಣಗಳಾಗಿವೆ. ಊರೂರು ಸುತ್ತುತ್ತಾ ರಸ್ತೆ ಬದಿಗಳಲ್ಲಿ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಾ ತೆರಳುತ್ತಿದ್ದಾರೆ. ಕುರಿಗಳಿಗೆ ಹೊಟ್ಟೆತುಂಬ ಮೇಯಲು ಸಿಗುತ್ತಿಲ್ಲ. ಸುಮ್ನೇ ಅವ್ನ ಸುತ್ತಾಡಿಸೋ ಕೆಲಸ ಒಂದ್ ಮಾಡ್ತೀದ್ದೀವಿ ನೋಡ್ರೀ ಅನ್ನುತ್ತಾರೆ ಕುರಿಗಾಹಿಗಳು.
ಉರಿ ಬಿಸಿಲು
ಬರ ಹಿನ್ನೆಲೆ ಕುರಿಗಳಿಗೆ ಮೇವಿಲ್ಲ. ನಿತ್ಯ ಮೇವು ಅರಸಿ ದೂರ ದೂರ ಹೋಗಬೇಕಾಗಿದೆ. ಮಳೆ ಆಗದಿದ್ದರೆ ಬಹಳ ತೊಂದರೆ ಆಗಲಿದೆ. ಕುರಿಗಳ ಸಾಕುವುದು ಕಷ್ಟಕರವಾಗಿದೆ ಎನ್ನುತ್ತಾರೆ ಕುರಿಗಾಹಿ ಸೋಮಣ್ಣ.