ಸಿರಿಗೆರೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಸಿದ್ಧತೆ

KannadaprabhaNewsNetwork | Updated : Oct 31 2023, 01:17 AM IST

ಸಾರಾಂಶ

ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಮೂರು ದಿನಗಳ ಕಾಲ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆದಿದ್ದು, ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನವೆಂಬರ್‌ ೩ ರಿಂದ ೫ರ ವರೆಗೆ ವಿವಿಧ ಚಿಂತನಾ ಗೋಷ್ಠಿಗಳು, ಉದಯೋನ್ಮುಖ ಕವಿಗಳ ಗೋಷ್ಠಿ, ಸಾಂಸ್ಕೃತಿಕ ಚಟುವಟಿಕೆಗಳು, ಕನ್ನಡ ಗೀತೆಗಳ ಗಾಯನ, ನಾಟಕಗಳು ನಡೆಯಲಿವೆ.

ತರಳಬಾಳು ಶ್ರೀ ನೇತೃತ್ವ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ, ಕವಿಗೋಷ್ಠಿ ಆಯೋಜನೆ ಕನ್ನಡಪ್ರಭ ವಾರ್ತೆ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಮೂರು ದಿನಗಳ ಕಾಲ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆದಿದ್ದು, ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನವೆಂಬರ್‌ ೩ ರಿಂದ ೫ರ ವರೆಗೆ ವಿವಿಧ ಚಿಂತನಾ ಗೋಷ್ಠಿಗಳು, ಉದಯೋನ್ಮುಖ ಕವಿಗಳ ಗೋಷ್ಠಿ, ಸಾಂಸ್ಕೃತಿಕ ಚಟುವಟಿಕೆಗಳು, ಕನ್ನಡ ಗೀತೆಗಳ ಗಾಯನ, ನಾಟಕಗಳು ನಡೆಯಲಿವೆ. ನವೆಂಬರ್‌ ೩ರಂದು ವಿವಿಧ ಕಲಾತಂಡಗಳ ವೈವಿಧ್ಯಮಯ ಭಾಗವಹಿಸುವಿಕೆ ಮೂಲಕ ಆರಂಭವಾಗಲಿರುವ ಭುವನೇಶ್ವರಿ ತಾಯಿ ಪ್ರತಿಮೆಯ ಮೆರವಣಿಗೆಗೆ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಚಾಲನೆ ನೀಡುವರು. ಮೆರವಣಿಗೆಯ ನಂತರ ಕನ್ನಡ ಧ್ವಜಾರೋಹಣ, ಕನ್ನಡ ಗೀತೆಗಳ ಗಾಯನ ನಡೆಯಲಿದೆ. ಭುವನೇಶ್ವರಿ ತಾಯಿ ಮೆರವಣಿಗೆಯಲ್ಲಿ ಸಿರಿಗೆರೆಯ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಸುಮಾರು ೫೦೦೦ ಮಕ್ಕಳು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನ ಎಲ್ಲ ಜಿಲ್ಲಾ ಅಧ್ಯಕ್ಷರನ್ನು ಒಂದೆಡೆ ಸೇರಿಸಿ ಗೌರವ ಸಮರ್ಪಣೆ ನೀಡುವ ಕಾರ್ಯಕ್ರಮ ಈ ಸಲದ ವಿಶೇಷ. ಜೊತೆಗೆ ಈ ಬಾರಿಯ ರಾಜ್ಯ ಪ್ರಶಸ್ತಿ ಪುರಸ್ಕೃತರನ್ನು ಸಹ ಆಹ್ವಾನಿಸಿ ಸತ್ಕರಿಸಲಾಗುವುದು. ಕನ್ನಡ ಸಾಹಿತ್ಯ ಮತ್ತು ಪರಂಪರೆ ಕುರಿತ ವಿಚಾರ ಗೋಷ್ಠಿ, ನಾಡು-ನುಡಿಗೆ ದುಡಿದ ಮಹನೀಯರನ್ನು ನೆನಪಿಸಿಕೊಳ್ಳುವ ಗೋಷ್ಠಿ, ವಚನ ಸಾಹಿತ್ಯದ ಪ್ರಸ್ತುತತೆ ಕುರಿತ ಚಿಂತನ ಮಂಥನ, ತಂತ್ರಜ್ಞಾನದೊಂದಿಗೆ ಕನ್ನಡ ಬೋಧನೆ ಕುರಿತ ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಕವಿಗೋಷ್ಠಿಯಲ್ಲಿ ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಬಳ್ಳಾರಿ ಜಿಲ್ಲೆಗಳ ಉದಯೋನ್ಮುಖ ಕವಿಗಳು ಭಾಗಿಯಾಗಲಿದ್ದಾರೆ. ಜೊತೆಗೆ ರಸಪ್ರಶ್ನೆ, ಕನ್ನಡ ಸುಮಧುರ ಗೀತ ಗಾಯನ, ಮಧುರ ಮಧುರವೀ ಮಂಜುಳಗಾನ, ಶಾಲಾ ಮಕ್ಕಳ ನೃತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರಿನ ಅದಮ್ಯ ರಂಗ ಸಂಸ್ಕೃತಿಯಿಂದ ನಾನು ಚಂದ್ರಗುಪ್ತನೆಂಬ ಮೌರ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಬಾಕ್ಸ್: ೫೦೦೦ ಮಕ್ಕಳಿಂದ ಕನ್ನಡ ಗೀತೆಗಳ ಗಾಯನ: ರಾಜ್ಯೋತ್ಸವದ ಅಂಗವಾಗಿ ಸಿರಿಗೆರೆಯ ಶಾಲೆ-ಕಾಲೇಜುಗಳ ೫೦೦೦ ಮಕ್ಕಳು ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ ನಡೆಸುವರು. ಇದೊಂದು ಅಪರೂಪದ ಸಂದರ್ಭವಾಗಿದ್ದು, ಪೂರ್ವ ಪ್ರಾಥಮಿಕದಿಂದ ಪದವಿ ತರಗತಿಗಳ ವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗುವರು. ನಾಡಿನ ಪ್ರಸಿದ್ಧ ಕವಿಗಳ ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ, ಎಲ್ಲಾದರೂ ಇರು ಎಂತಾದರೂ ಇರು, ಹಚ್ಚೇವು ಕನ್ನಡದ ದೀಪ ಮುಂತಾದ ಜನಪ್ರಿಯ ಗೀತೆಗಳನ್ನು ಹಾಡುವರು.

ಚಿತ್ರ: ಕನ್ನಡ ರಾಜ್ಯೋತ್ಸವ ಆಚರಣೆ ಲಾಂಛನ

Share this article