ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಸಂಸ್ಥೆ ಆರಂಭಕ್ಕೆ ಸಿದ್ಧತೆ

KannadaprabhaNewsNetwork |  
Published : Jun 19, 2024, 01:08 AM IST
546 | Kannada Prabha

ಸಾರಾಂಶ

ಕಳೆದ 20 ವರ್ಷದ ಹಿಂದೆ ಸರ್ಕಾರ ಇಲ್ಲಿನ ವಿಮಾನ‌ ನಿಲ್ದಾಣದ ಬಳಿ ಇನ್ಫೋಸಿಸ್ ಸಂಸ್ಥೆಯ ಆರಂಭಕ್ಕೆ ಜಮೀನು ನೀಡಿತ್ತು. ಇನ್ಫೋಸಿಸ್ ಕೂಡ ಕಟ್ಟಡ‌ ನಿರ್ಮಿಸಿ ದಶಕಕ್ಕಿಂತಲೂ ಹೆಚ್ಚು ಸಮಯವೇ ಆಗಿತ್ತು. ಆದರೆ ಸಂಸ್ಥೆ‌ ಮಾತ್ರ ಕಾರ್ಯಾರಂಭ ಆಗಿರಲಿಲ್ಲ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ಜನರಿಗೆ ಸಿಹಿ ಸುದ್ದಿ. ಕೊನೆಗೂ ಇನ್ಫೋಸಿಸ್ ಸಂಸ್ಥೆಯು ತನ್ನ‌ ಉದ್ಯೋಗಿಗಳನ್ನು ಹುಬ್ಬಳ್ಳಿಗೆ ಕಳುಹಿಸಲು ತೀರ್ಮಾನಿಸಿದೆ. ಹುಬ್ಬಳ್ಳಿಗೆ ಹೋಗುವ ಸಿಬ್ಬಂದಿಗೆ ಹೆಚ್ಚಿನ ಭತ್ಯೆ ಕೊಡುವುದಾಗಿ ತಿಳಿಸಿದೆ. ಇದರಿಂದ ಐಟಿ ಉದ್ಯಮಕ್ಕೆ ಬೂಸ್ಟ್ ನೀಡಿದಂತಾಗಿದೆ. ಮತ್ತಷ್ಟು ಐಟಿ ಉದ್ಯಮಗಳು ಬರಲು ಚಾಲನೆ ನೀಡಿದಂತಾಗುತ್ತದೆ. ಇನ್ಫೋಸಿಸ್ ಸಂಸ್ಥೆಯ ಇಲ್ಲಿಗೆ ಬರುತ್ತಿರುವುದಕ್ಕೆ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಸ್ವಾಗತಿಸಿದ್ದಾರೆ.

ಕಳೆದ 20 ವರ್ಷದ ಹಿಂದೆ ಸರ್ಕಾರ ಇಲ್ಲಿನ ವಿಮಾನ‌ ನಿಲ್ದಾಣದ ಬಳಿ ಇನ್ಫೋಸಿಸ್ ಸಂಸ್ಥೆಯ ಆರಂಭಕ್ಕೆ ಜಮೀನು ನೀಡಿತ್ತು. ಇನ್ಫೋಸಿಸ್ ಕೂಡ ಕಟ್ಟಡ‌ ನಿರ್ಮಿಸಿ ದಶಕಕ್ಕಿಂತಲೂ ಹೆಚ್ಚು ಸಮಯವೇ ಆಗಿತ್ತು. ಆದರೆ ಸಂಸ್ಥೆ‌ ಮಾತ್ರ ಕಾರ್ಯಾರಂಭ ಆಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಪ್ರತಿಭಟನೆ ನಡೆದಿತ್ತು. ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದ್ದವು.

ವಿಧಾನಸಭೆ ಅಧಿವೇಶನದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇನ್ಫೋಸಿಸ್‌ಗೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯಬೇಕೆಂದೂ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದುಂಟು. ಇದೀಗ ಸಂಸ್ಥೆಯೂ ಹುಬ್ಬಳ್ಳಿಗೆ ತನ್ನ ಉದ್ಯೋಗಿಗಳನ್ನು ಕಳುಹಿಸಲು ತೀರ್ಮಾನಿಸಿದೆ. ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ಭತ್ಯೆ ನೀಡುವುದಾಗಿಯೂ ಸಂಸ್ಥೆ ಹೇಳಿಕೊಂಡಿದೆ. ಇದು ಸಂತಸಕರ ಎಂದು ಜನಪ್ರತಿನಿಧಿಗಳು, ಯುವಕರು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಸಂಸ್ಥೆ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಉಕ ಭಾಗದ ಅಭಿವೃದ್ಧಿಗೆ ಕೊಡುಗೆ

ಇನ್ಫೋಸಿಸ್ ತನ್ನ ಹುಬ್ಬಳ್ಳಿ ಶಾಖೆ ಮೂಲಕ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶ್ಲಾಘಿಸಿದ್ದಾರೆ. ಇನ್ಫೋಸಿಸ್‌ ಹುಬ್ಬಳ್ಳಿ ಕ್ಯಾಂಪಸ್‌ ಉತ್ತರ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಸದಾ ಉತ್ತೇಜನ, ಪ್ರೋತ್ಸಾಹ ನೀಡಲಿದೆ. ಸಂಸ್ಥೆಯ ಇಲ್ಲಿನ ಕೇಂದ್ರದಲ್ಲಿ ಹೆಚ್ಚು ಕಾರ್ಯ ಚಟುವಟಿಕೆ ಕೈಗೊಳ್ಳುವಂತೆ ಈ ಹಿಂದೆ ಜನಪ್ರತಿನಿಧಿಗಳಿಂದ ಬೇಡಿಕೆ ಸಲ್ಲಿಸಲಾಗಿತ್ತು. ಇದೀಗ ತಮ್ಮ ಉದ್ಯೋಗಿಗಳನ್ನು ಇಲ್ಲಿ ವರ್ಗಾಯಿಸುತ್ತಿರುವುದು ಸಂತಸಕರ. ಇದರಿಂದ ಐಟಿ ಉದ್ಯಮದ ಬೆಳವಣಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದಿದ್ದಾರೆ. ಇನ್ಫೋಸಿಸ್ ಈ ಕ್ರಮದಿಂದ ಎರಡನೇ ಶ್ರೇಣಿಯ ನಗರಗಳ ಪ್ರತಿಭಾವಂತ ಯುವಕರಿಗೆ ಹೆಚ್ಚು ಹೆಚ್ಚು ಉದ್ಯೋಗ ಲಭ್ಯವಾಗಿದ್ದು, ಅಭಿವೃದ್ಧಿಗೂ ಉತ್ತಮ ಅವಕಾಶಗಳನ್ನು ಕಲ್ಪಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಸಂಸ್ಥೆ ಕ್ರಮ ಸ್ವಾಗತಾರ್ಯ

ಹುಬ್ಬಳ್ಳಿ ಇನ್ಫೋಸಿಸ್ ಕೇಂದ್ರಕ್ಕೆ‌ ತನ್ನ ಉದ್ಯೋಗಿಗಳನ್ನು ವರ್ಗಾಯಿಸಲು ಮುಂದಾಗಿರುವ ಸಂಸ್ಥೆಯ ಕ್ರಮ ಸ್ವಾಗತಾರ್ಹ ಎಂದು ಶಾಸಕ ಹಾಗೂ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕ್ಷೇತ್ರದ ಓರ್ವ ಜನಪ್ರತಿನಿಧಿಯಾಗಿ‌ ಆಯ್ಕೆ ಮಾಡಿದ‌ ಜನರ ಹಿತ‌ಕಾಯುವುದು ಮತ್ತು ಕ್ಷೇತ್ರದ ಅಭಿವೃದ್ಧಿ ಕೈಕೊಳ್ಳುವುದು‌ ನನಗಿರುವ ಜವಾಬ್ದಾರಿ. ಸಂಸ್ಥೆಯು ಈ‌ ಭಾಗದಲ್ಲಿ ಉದ್ಯೋಗ ಸೃಷ್ಟಿಸಲಿ ಮತ್ತು ವಹಿವಾಟು ವೃದ್ಧಿಸಲಿ ಎಂಬ ಉದ್ದೇಶದಿಂದ ರೈತರ ಬೆಲೆ‌ ಬಾಳುವ ಭೂಮಿಯನ್ನು ಇನ್ಫೋಸಿಸ್‌ಗೆ ಕೊಡಲಾಗಿತ್ತು. ಆದರೆ, ಸಂಸ್ಥೆಯು ಯಾವುದೇ ಚಟುವಟಿಕೆಗಳನ್ನು ಆರಂಭಿಸದೇ ಜನರ‌ ನಿರೀಕ್ಷೆಯನ್ನು ಹುಸಿಯಾಗಿಸಿತು. ಇದರಿಂದ ಸ್ಥಳೀಯವಾಗಿ ಲಾಭ ಆಗುವ ಲಕ್ಷಣಗಳು ಮಾಯವಾಗಿದ್ದವು. ಈ ಕಾರಣದಿಂದ ಹುಬ್ಬಳ್ಳಿಯಲ್ಲಿನ ಇನ್ಫೋಸಿಸ್ ಸಂಸ್ಥೆಯ ಕೇಂದ್ರದ ನಿರ್ಲಕ್ಷ್ಯದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ.‌

ಸಂಸ್ಥೆಯು ಈಗ ಹೆಚ್ಚಿನ ಭತ್ಯೆ ಕೊಡುವ ಭರವಸೆಯೊಂದಿಗೆ ತನ್ನ ಉದ್ಯೋಗಿಗಳನ್ನು ಹುಬ್ಬಳ್ಳಿ ಕೇಂದ್ರಕ್ಕೆ‌ ವರ್ಗಾವಣೆ ಮಾಡಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ಈ‌ ಭಾಗದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳು ಹೆಚ್ಚಳವಾಗಲಿವೆ. ಜೊತೆಗೆ ಈ ಭಾಗದ ಅಭಿವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು