27 ರಂದು ಕನ್ನಡ ಭವನ ಉದ್ಘಾಟನೆಗೆ ಸಿದ್ಧತೆ

KannadaprabhaNewsNetwork | Published : May 23, 2025 12:35 AM
ಮೇ 27 ರಂದು ಬೆಳಿಗ್ಗೆ 8.30 ಕ್ಕೆ ಕನ್ನಡ ಭವನ ಮುಂಭಾಗದಲ್ಲಿ ರಾಷ್ಟ್ರಧ್ವಜ, ನಾಡ ಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ. ರಾಷ್ಟ್ರಧ್ವಜವನ್ನು ಸಚಿವ ಡಾ.ಎಂ.ಸಿ.ಸುಧಾಕರ್ ನೆರವೇರಿಸಲಿದ್ದಾರೆ, ನಾಡ ಧ್ವಜವನ್ನು ಶಾಸಕ ಪ್ರದೀಪ್ ಈಶ್ವರ್, ಪರಿಷತ್ತಿನ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ನೆರವೇರಿಸುತ್ತಾರೆ.
Follow Us

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಕನ್ನಡ ಭವನವನ್ನು ಮೇ 27 ರಂದು ಲೋಕಾರ್ಪಣೆ ಹಾಗೂ ಮೇ 27 ಮತ್ತು 28 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೂತನ ಕನ್ನಡ ಭವನದಲ್ಲೇ ಶಿಷ್ಟಾಚಾರದಂತೆ ಹಾಗೂ ಸಂಭ್ರಮದಿಂದ ನಡೆಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕನ್ನಡ ಭವನ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭವನವನ್ನು 17.83 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ವಿವರ

ಮೇ 27 ರಂದು ಬೆಳಿಗ್ಗೆ 8.30 ಕ್ಕೆ ಕನ್ನಡ ಭವನ ಮುಂಭಾಗದಲ್ಲಿ ರಾಷ್ಟ್ರಧ್ವಜ, ನಾಡ ಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಗಳ ಧ್ವಜಾರೋಹಣ ಮಾಡಲು ತೀರ್ಮಾನಿಸಲಾಗಿದೆ. ರಾಷ್ಟ್ರಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಧ್ವಜಾರೋಹಣ ಮಾಡಲಿದ್ದಾರೆ, ನಾಡ ಧ್ವಜವನ್ನು ಶಾಸಕ ಪ್ರದೀಪ್ ಈಶ್ವರ್, ಪರಿಷತ್ತಿನ ಧ್ವಜವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೋಡಿರಂಗಪ್ಪ ನೆರವೇರಿಸುತ್ತಾರೆ.

ಮೆರವಣಿಗೆಯು 9.15 ಕ್ಕೆ ನಗರದ ಅಂಬೇಡ್ಕರ್ ಭವನದಿಂದ ಚಾಲನೆಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡದ ಜೈಕಾರ ಹಾಗೂ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಲಿದೆ,ಶಿಡ್ಲಘಟ್ಟ ವೃತ್ತದ ಮುಖಾಂತರ ಕನ್ನಡ ಭವನದ ವರೆಗೆ ಮೆರವಣಿಗೆ ನಡೆಸಲಾಗುವುದು, ನಗರದ ಎಲ್ಲಾ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಸಿನಿಮಾ ಪ್ರದರ್ಶಿಸಲು ಸೂಚನೆ ನೀಡಲಾಗಿದೆ ಎಂದರು.

14 ಸಮಿತಿಗಳ ರಚನೆ

ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು 14 ಸಮಿತಿಗಳನ್ನು ರಚಿಸಿ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕಾರ್ಯ ಹಂಚಿಕೆ ಮಾಡಲಾಗಿದೆ. ಈ ಸಮಿತಿಗಳ ಸದಸ್ಯ ಅಧಿಕಾರಿಗಳು ಎಲ್ಲರ ಸಮನ್ವಯತೆಯನ್ನು ಸಾಧಿಸಿಕೊಂಡು ತಮಗೆ ನೀಡಿರುವ ಕೆಲಸವನ್ನು ಜವಾಬ್ದಾರಿಯುತ್ತಾವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ತಹಶೀಲ್ದಾರ ಅನಿಲ್, ಕನ್ನಡ ಮತ್ತು ಸಂಸ್ಕೃತಿಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಕೊಡಿರಂಗಪ್ಪ, ತಾಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ಜಿಲ್ಲಾ ಜಂಟಿ ಕಾರ್ಯದರ್ಶಿ ಮಂಚನಬೆಲೆ ಶ್ರೀನಿವಾಸ್, ಕಾಸಾಪ ಸದಸ್ಯರು, ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮುಖಂಡರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.