12 ಅಡಿ ಎತ್ತರದ ನೂತನ ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಸಿದ್ಧತೆ

KannadaprabhaNewsNetwork | Published : Oct 28, 2024 12:52 AM

ಸಾರಾಂಶ

ಭದ್ರಾವತಿ ನಗರದ ಬಿ.ಎಚ್.ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ 12 ಅಡಿ ಎತ್ತರದ ನೂತನ ಪ್ರತಿಮೆ ಅನಾವರಣಗೊಳ್ಳಲು ಸಿದ್ದತೆಗಳು ನಡೆಯುತ್ತಿವೆ.

ಅನಂತಕುಮಾರ್

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ 12 ಅಡಿ ಎತ್ತರದ ನೂತನ ಪ್ರತಿಮೆ ಅನಾವರಣಗೊಳ್ಳಲು ಸಿದ್ಧತೆಗಳು ನಡೆಯುತ್ತಿದ್ದು, ದಲಿತ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೈಜತೆ ಹೋಲುವ ಸುಂದರವಾದ ಕಂಚಿನ ಪ್ರತಿಮೆ ಅನಾವರಣಗೊಳಿಸುಂತೆ ನಿರಂತರವಾಗಿ ಹೋರಾಟಗಳು ನಡೆದ ಪರಿಣಾಮ ಈ ಹಿಂದೆ 2007ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು 6 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ್ದರು. ಆದರೆ ಈ ಪ್ರತಿಮೆ ಕುಬ್ಜವಾಗಿದ್ದು, ಅಂಬೇಡ್ಕರ್‌ರವರ ನೈಜತೆ ಹೋಲದ ಹಿನ್ನಲೆಯಲ್ಲಿ ಪ್ರತಿಮೆ ಬದಲಿಸಿ ಹೊಸ ಪ್ರತಿಮೆ ಅನಾವರಣಗೊಳಿಸುವಂತೆ ಪುನಃ ಹೋರಾಟಗಳು ಆರಂಭಗೊಂಡಿದ್ದವು.

ಹೋರಾಟದ ಪರಿಣಾಮ ನಗರಸಭೆ ವತಿಯಿಂದ 12 ಅಡಿ ಎತ್ತರದ ನೂತನ ಪ್ರತಿಮೆ ಸ್ಥಾಪನೆಗೆ ತೀರ್ಮಾನ ಕೈಗೊಂಡು ಈ ಹಿಂದೆ ನಗರಸಭೆ ಪೌರಾಯುಕ್ತರಾಗಿದ್ದ ಮನೋಹರ್‌ರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಸಹ ಪಡೆದುಕೊಂಡಿದ್ದರು. ಅಲ್ಲದೆ ಬಿ.ಎಚ್ ರಸ್ತೆ ಮಧ್ಯ ಭಾಗದಲ್ಲಿ ಪ್ರತಿಷ್ಠಾಪನೆಗೆ ಸಿದ್ಧತೆ ಕೈಗೊಂಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಪ್ರತಿಮೆ ಇರುವ ಜಾಗದಲ್ಲಿಯೇ ನೂತನ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ.

*₹28 ಲಕ್ಷ ವೆಚ್ಚದ ಪ್ರತಿಮೆ: ಅಂಬೇಡ್ಕರ್‌ರವರ 12 ಅಡಿ ಎತ್ತರದ ನೂತನ ಪ್ರತಿಮೆ ಸುಮಾರು 28 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಅಂದಾಜು ₹37 ಲಕ್ಷ ವೆಚ್ಚದ ಟೆಂಡರ್ ನೀಡಲಾಗಿತ್ತು. ಉಳಿದಂತೆ ಪ್ರತಿಮೆ ಪ್ರತಿಷ್ಠಾಪನಾ ಸ್ಥಳದ ಕಾಮಗಾರಿಗಾಗಿ ಅಂದಾಜು ₹19 ಲಕ್ಷ ವೆಚ್ಚದ ಟೆಂಡರ್ ನೀಡಲಾಗಿದ್ದು, ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಅಂಬೇಡ್ಕರ್ ನೈಜತೆ ಹೋಲುವ, ಆಕರ್ಷಕವಾದ 12 ಅಡಿ ಎತ್ತರದ ಪ್ರತಿಮೆ ನಗರಕ್ಕೆ ಆಗಮಿಸಲಿದೆ.

*ವಾಹನ ಸಂಚಾರ ದಟ್ಟಣೆ : ನಗರದಲ್ಲಿ ಪ್ರತಿಯೊಂದು ಹೋರಾಟಕ್ಕೂ ಈ ಸ್ಥಳವೇ ವೇದಿಕೆಯಾಗಿದ್ದು, ಬಿ.ಎಚ್ ರಸ್ತೆ ನಗರದ ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಸದಾ ವಾಹನಗಳು, ಪಾದಚಾರಿಗಳ ಸಂಚಾರವಿರುತ್ತದೆ. ಅಲ್ಲದೆ ಆಗಾಗ ಸಂಚಾರಿ ದಟ್ಟಣೆ ಉಂಟಾಗುತ್ತಿದ್ದು, ಹೋರಾಟ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಹಮ್ಮಿಕೊಂಡ ಸಂದರ್ಭದಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಇದರಿಂದಾಗಿ ಸಮಸ್ಯೆ ಎದುರಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರತಿಮೆ ಪ್ರತಿಷ್ಠಾಪನಾ ಸ್ಥಳ ಬದಲಿಸುವಂತೆ ಕೆಲವು ತಿಂಗಳುಗಳಿಂದ ಹೋರಾಟಗಳು ಸಹ ನಡೆಯುತ್ತಿವೆ. ಆದರೆ ಇದಕ್ಕೆ ನಗರಸಭೆ ಆಡಳಿತವಾಗಲಿ, ಶಾಸಕರಾಗಲಿ ಸ್ಪಂದಿಸಿಲ್ಲ.

Share this article