ಕೋಟೆ ಮಾರಿಕಾಂಬ ಜಾತ್ರೆಗೆ ಭರದ ಸಿದ್ಧತೆ

KannadaprabhaNewsNetwork |  
Published : Feb 23, 2026, 01:30 AM IST
ಪೋಟೋ: 22ಎಸ್‌ಎಂಜಿಕೆಪಿ04ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಮಾಡಿರುವ ಅಲಂಕಾರ. | Kannada Prabha

ಸಾರಾಂಶ

ಫೆ.24ರಿಂದ 5 ದಿನ ಕಾಲ ನಡೆಯುವ ಶಿವಮೊಗ್ಗದ ಐತಿಹಾಸಿಕ ಕೋಟೆ ಮಾರಿಕಾಂಬ ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು, ಕೋಟೆ ಮಾರಿಕಾಂಬ ಸೇವಾ ಸಮಿತಿಯಿಂದ ಭರದ ಸಿದ್ಧತೆಗಳು ನಡೆದಿವೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಫೆ.24ರಿಂದ 5 ದಿನ ಕಾಲ ನಡೆಯುವ ಶಿವಮೊಗ್ಗದ ಐತಿಹಾಸಿಕ ಕೋಟೆ ಮಾರಿಕಾಂಬ ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು, ಕೋಟೆ ಮಾರಿಕಾಂಬ ಸೇವಾ ಸಮಿತಿಯಿಂದ ಭರದ ಸಿದ್ಧತೆಗಳು ನಡೆದಿವೆ.

ಶಿವಮೊಗ್ಗದಲ್ಲಿ ಕೋಟೆ ಮಾರಿಕಾಂಬ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. ಕೆಳದಿ ಶಿವಪ್ಪನಾಯಕ ಅರಸರ ಕಾಲದಿಂದಲೂ ಈ ಹಬ್ಬ ಇಂದಿನವರೆಗೆ ಪ್ರತೀ ಎರಡು ವರ್ಷಕ್ಕೊಮ್ಮೆ ಅತ್ಯಂತ ಸಡಗರ-ಸಂಭ್ರಮದಿಂದ ಭಾವೈಕ್ಯತೆಯಿಂದ ಎಲ್ಲಾ ಸಮಾಜದ ಸಹಕಾರದೊಂದಿಗೆ ಆಚರಿಸುತ್ತಾ ಬಂದಿದ್ದು, ರಾಜ್ಯದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿದೆ.

ಐದು ದಿನ ಕಾಲ ಅದ್ದೂರಿಯಾಗಿ ನಡೆಯುವ ಶ್ರೀ ಕೋಟೆ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತಾದಿಗಳಿಗೂ ಸರತಿಸಾಲಿನಲ್ಲಿ ನಿಲ್ಲುವಾಗ ಬಿಸಿಲಿನಿಂದ ಬಳಲುಬಾರದು ಎಂಬ ಕಾರಣಕ್ಕಾಗಿ ಶಿವಪ್ಪನಾಯಕ ಮಹಾದ್ವಾರದಿಂದ ಮತ್ತು ಕರ್ನಾಟಕ ಸಂಘದ ಬಳಿಯಿಂದ ಜರ್ಮನ್ ಟೆಂಟ್ ಹಾಕಲಾಗುತ್ತಿದೆ. ಶಾಮಿಯಾನ ಕೂಡ ಹಾಕಲಾಗುತ್ತದೆ. ಇದರ ಜೊತೆಗೆ ಗಾಂಧಿಬಜಾರಿನ ಮಹಾದ್ವಾರದಲ್ಲಿ ಸುಮಾರು 22 ಅಡಿ ಎತ್ತರದ ಕಾಳಿ ದೇವಿಯ ಮೂರ್ತಿಯನ್ನು ಅಲಂಕರಿಸಿ ನಿರ್ಮಿಸಲಾಗುತ್ತಿದೆ. ಜೊತೆಗೆ ಇಡೀ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ವಿದ್ಯುತ್ ಅಲಂಕಾರವನ್ನು ಮಾಡಲಾಗುತ್ತಿದ್ದು, ಅಲ್ಲದೆ ಸಂಸ್ಕಾರಕ್ಕೆ ತೊಂದರೆಯಾಗದಂತೆ ನಗರದೆಲ್ಲೆಡೆ ಸಂಘ-ಸಂಸ್ಥೆಗಳಿಂದ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.

ಅಂತಿಮ ಸಿದ್ಧತೆ ಜೋರು: ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ಅಂತಿಮ ಹಂತದ ಸಿದ್ಧತೆ ನಡೆದಿದ್ದು. ಈ ಬಾರಿ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಮೊದಲ ದಿನ ಗಾಂಧಿ ಬಜಾರ್‌ನ ತವರು ಮನೆಯಲ್ಲಿ ಮಾರಿಕಾಂಬೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಲ್ಲಿ ಪೂಜೆ, ದರ್ಶನದ ಬಳಿಕ ಕೋಟೆ ರಸ್ತೆಯ ಮಾರಿಕಾಂಬ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಫೆ.24ರಿಂದ ದರ್ಶನ, ಪೂಜೆ ನೆರವೇರಲಿದೆ.

ಈ ಬಾರಿ ಜಾತ್ರೆಯಲ್ಲಿ ಅಲಂಕಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಣ್ಣು, ಕಾಯಿ, ಹೂವುಗಳನ್ನು ಬಳಸಿ ಅಲಂಕಾರ ಮಾಡಲಾಗುತ್ತಿದೆ. ಇದಕ್ಕಾಗಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ 50ಕ್ಕೂ ಹೆಚ್ಚು ನುರಿತ ಕೆಲಸಗಾರರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ.

ವಿವಿಧ ಹಣ್ಣು, ಕಬ್ಬು, ತೆಂಗಿನ ಕಾಯಿ, ವಿವಿಧ ಹೂವಿನಿಂದ ಅಲಂಕಾರ ಮಾಡಲು ಯೋಜಿಸಲಾಗಿದೆ. ಈಗಾಗಲೇ ದೇವಸ್ಥಾನದ ಒಳಾಂಗಣದಲ್ಲಿ ಕಬ್ಬು, ಹಣ್ಣಿನಿಂದ ಅಲಂಕಾರ ಮಾಡಲಾಗಿದೆ. ಕೃತಕ ಹೂವುಗಳನ್ನು ಕೂಡ ಹಾಕಲಾಗಿದೆ. ದೇವಸ್ಥಾನದ ಆವರಣದಲ್ಲಿಯೂ ಅಲಂಕಾರ ನೋಡುಗರ ಕಣ್ಣು ಸೆಳೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯದ ಮೂಲಕ ಮನಸುಗಳ ಬೆಸೆದ ಜಿಎಸ್‍ಎಸ್: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ
ಪ್ರಬುದ್ಧರು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಡಾ.ಭಗವಾನ್‌