ಹೂವಿನಹಡಗಲಿ: ನಾಡಿನ ಭಕ್ತರ ಆರಾಧ್ಯ ದೈವ ಮೈಲಾರಲಿಂಗೇಶ್ವರ ಜಾತ್ರೆಗೆ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಫಾಗಿಂಗ್, ಧೂಳು ಮುಕ್ತ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿ ಭರದ ಸಿದ್ದತೆ ನಡೆಸಿದೆ.
ದೇವಸ್ಥಾನ ಸೇರಿದಂತೆ ಗ್ರಾಮದ ಚರಂಡಿಗಳು ಹಾಗೂ ಪರಿಷೆ ಸೇರುವ ಜಾಗದಲ್ಲಿ ಗ್ರಾಮ ಪಂಚಾಯಿತಿಯ 45 ಸ್ವಚ್ಛತಾ ಸಿಬ್ಬಂದಿಯಿದ ಸ್ವಚ್ಛತೆ ನಡೆಯುತ್ತಿದೆ. ಟ್ರ್ಯಾಕ್ಟರ್‌ಗಳಿಂದ ಪರಿಷೆ ಸೇರುವ ಜಾಗ ಸಮತಟ್ಟು ಮಾಡಲಾಗುತ್ತಿದೆ. ತಾತ್ಕಾಲಿಕ ಬಸ್ ನಿಲ್ದಾಣ ಸೇರಿದಂತೆ ಇತರೆ ಕಡೆಗಳಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗುತ್ತಿದೆ.
ತುಂಗಭದ್ರಾ ನದಿ ತೀರದ 4 ಕಡೆಗಳಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ 400 ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ನದಿಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಕೆಲವೆಡೆಗಳಲ್ಲಿ ಗುಂಡಿಗಳಿವೆ. ನೀರಿನಲ್ಲಿ ಸ್ನಾನಕ್ಕೆ ಹೋಗುವವರಿಗೆ ಎಚ್ಚರಿಕೆಯ ನಾಮಫಲಕಗಳ ವ್ಯವಸ್ಥೆ ಮಾಡಲಾಗಿದೆ.ಡೆಂಕಣ ಮರಡಿಯಲ್ಲಿ ಮರಡಿ ಕಾಯುತ್ತಿರುವ ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನಿತ್ಯ ಸ್ವಚ್ಛತೆಗೆ ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ಬೆಳಕಿನ ವ್ಯವಸ್ಥೆ, ಸೊಳ್ಳೆಗಳ ನಿಯಂತ್ರಣಕ್ಕಾಗಿ ನಿತ್ಯ ಸಂಜೆ ವೇಳೆ ಫಾಗಿಂಗ್ ಮಾಡಲಾಗುತ್ತಿದೆ.
ಪ್ರತಿ ವರ್ಷ ದೇವಸ್ಥಾನದಿಂದ ₹15 ಲಕ್ಷ ಹಣವನ್ನು ಗ್ರಾಮ ಪಂಚಾಯಿತಿಗೆ ನೀಡಲಾಗುತ್ತಿತ್ತು. ಆದರೆ, ಕಳೆದ ಬಾರಿ ನಯಾ ಪೈಸೆ ಹಣ ನೀಡಿಲ್ಲ. ಗ್ರಾಪಂನ ವರ್ಗ-1 ಹಣದಲ್ಲಿ, ಸ್ವಚ್ಛತೆ, ಶಾಮಿಯಾನ ಸೇರಿದಂತೆ ಇತರೆ ಖರ್ಚುಗಳನ್ನು ಭರಿಸಲಾಗಿತ್ತು. ಇದರಿಂದ ಗ್ರಾಪಂಗೆ ದೊಡ್ಡ ಹೊರೆಯಾಗಿತ್ತು. ಈ ಬಾರಿ ಜಿಲ್ಲಾಡಳಿತ ಮೈಲಾರ ಗ್ರಾಪಂಗೆ ದೇವಸ್ಥಾನದಿಂದ ಹಣವನ್ನು ನೀಡಿದರೇ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಅಧಿಕಾರಿಗಳು ಗಮನ ಹರಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.ಮೈಲಾರ ಜಾತ್ರೆಯಲ್ಲಿ ಕಾರ್ಣಿಕ ಜರುಗುವ ಡೆಂಕಣ ಮರಡಿಯಲ್ಲಿ ಅಗತ್ಯ ಸಿದ್ಧತೆ ಮಾಡಲಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಬ್ಯಾರಿಕೇಡ್ ವ್ಯವಸ್ಥೆ ಹಾಗೂ ವೀಕ್ಷಣೆ ಗೋಪುರಗಳನ್ನು ನಿರ್ಮಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಬಿ. ರಾಜಪ್ಪ ತಿಳಿಸಿದ್ದಾರೆ. ಮೈಲಾರ ಜಾತ್ರೆಗಾಗಿ ಸ್ವಚ್ಛತೆ, ಕುಡಿಯುವ ನೀರಿನ ನಿರ್ವಹಣೆ, ಕರ ವಸೂಲಿ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ತಾಪಂನಿಂದ 45 ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. ಎಲ್ಲ ಕಡೆಗೂ ಸ್ವಚ್ಛತೆ, ಸಮತಟ್ಟು, ಫಾಗಿಂಗ್ ಸೇರಿದಂತೆ ಇತರೆ ಸಿದ್ಧತೆ ಭರದಿಂದ ಸಾಗಿದೆ ಎಂದು ಮೈಲಾರ ಪಿಡಿಒ ಬಸವರಾಜ ಸಂಶಿ ತಿಳಿಸಿದ್ದಾರೆ.