ಹಾವೇರಿ: ನಗರದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ತಯಾರಿ ಜೋರಾಗಿದ್ದು, ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಟೋಪಿ, ಮೆಹಂದಿ, ಡ್ರೈಪ್ರೂಟ್ಸ್, ಶಾವಿಗೆ ಹಾಗೂ ಸಿಹಿ ತಿಂಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಇನ್ನು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೀರೆ, ಮಸ್ತಾನಿ ಗೌನ್, ದುಪ್ಪಟ್ಟಾ, ಸ್ಕಾರ್ಫ್, ಬುರ್ಖಾ, ಟೋಪಿ, ನಮಾಜ ಮಾಡಲು ಬಳಸುವ ನೆಲಹಾಸಿಗೆ, ಬಳೆಗಳು, ನೆಕ್ಲೆಸ್, ಕಿವಿಯೋಲೆ, ಪಾದರಕ್ಷೆ, ಸುಗಂಧ ದ್ರವ್ಯಗಳು, ನೇಲ್‌ಪಾಲಿಷ್, ಕಾಡಿಗೆ, ಬ್ಯಾಗ್, ಪರ್ಸ್, ಅತ್ತರ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆಯಿತು.
ಹಗಲಿನ ವೇಳೆ ಮಾರುಕಟ್ಟೆಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರು ಆಗಮಿಸುತ್ತಿದ್ದು, ಸಂಜೆ ವೇಳೆಗೆ ನಗರದ ಜನರು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಹೀಗಾಗಿ ದಿನವಿಡೀ ಮಾರುಕಟ್ಟೆ ತುಂಬಿ ತುಳುಕುತ್ತಿತ್ತು.ರಂಜಾನ್ ಹಬ್ಬದ ನಿಮಿತ್ತ ಸಿಹಿ ಖಾದ್ಯಗಳನ್ನು ತಯಾರಿಸಲು ಬಳಸುವ ಗೋಡಂಬಿ, ಪಿಸ್ತಾ, ದ್ರಾಕ್ಷಿ, ಬಾದಾಮಿ, ಗೋಡಂಬಿ, ಮೋಗಜ, ಉತ್ತತ್ತಿ ಮುಂತಾದ ಒಣಹಣ್ಣುಗಳ ವ್ಯಾಪಾರ ಭರ್ಜರಿಯಾಗಿತ್ತು. ಇನ್ನು ಹಬ್ಬದಲ್ಲಿ ಪ್ರಮುಖವಾಗಿ ತಯಾರಿಸುವ ಸುರ್ಕುರ್ಮಾಕ್ಕೆ ಬಳಸುವ ಶಾವಿಗೆಗೆ ಬೇಡಿಕೆ ಹೆಚ್ಚಾಗಿ ಕಂಡು ಬಂದಿತು. ಒಂದು ಕಟ್ಟು ಶಾವಿಗೆ ₹80ರಿಂದ ₹150ರ ವರೆಗೂ ಮಾರಾಟ ಮಾಡಲಾಯಿತು.
ಇನ್ನು ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ ವಿವಿಧ ಸುವಾಸನೆಯ ಸುಗಂಧ ದ್ರವ್ಯಗಳು ಲಗ್ಗೆ ಇಟ್ಟಿದ್ದು, ₹50ರಿಂದ ₹1 ಸಾವಿರದ ವರೆಗೆ ಬೆಲೆಯ ಅತ್ತರ, ಸುಗಂಧ ದ್ರವ್ಯಗಳು ಮಾರಾಟಗೊಂಡವು.ಅಂಗಡಿಗಳಲ್ಲಿ ಜನಸಂದಣಿ: ಯುಗಾದಿ ಹಬ್ಬದ ನಿಮಿತ್ತ ನಗರದ ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು, ಮಕ್ಕಳು, ವಯಸ್ಕರು, ಯುವಕರಾದಿಯಾಗಿ ಎಲ್ಲ ವಯೋಮಾನವದವರು ಹೊಸಬಟ್ಟೆ ಖರೀದಿಸಿದರು. ಹೀಗಾಗಿ ಬಟ್ಟೆ ಅಂಗಡಿಗಳು ಹೆಚ್ಚು ಜನಸಂದಣಿಯಿಂದ ಕೂಡಿದ್ದವು. ಅಷ್ಟೇ ಅಲ್ಲದೆ ಆಭರಣ ಮಳಿಗೆಗಳಲ್ಲಿಯೂ ಜನದಟ್ಟಣೆ ಕಂಡುಬಂದಿತು. ಬೆಳ್ಳಿ, ಬಂಗಾರದ ಆಭರಣಗಳನ್ನು ಖರೀದಿಸುವಲ್ಲಿ ಜನ ಮುಂದಾದರು.ಕಳೆದ ಎರಡ್ಮೂರು ದಿನಗಳಿಂದ ಯುಗಾದಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಬೇವು-ಬೆಲ್ಲದ ಸಾಮಗ್ರಿಗಳನ್ನು ಖರೀದಿ ಮಾಡಲು ನಗರ ಮತ್ತು ಗ್ರಾಮೀಣ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಬೇವು-ಬೆಲ್ಲದ ಸಾಮಗ್ರಿಗಳ ರೇಟು ದುಬಾರಿಯಾಗಿದೆ. ಜಾಸ್ತಿ ಖರೀದಿ ಮಾಡುವ ಬದಲು ಸಾಂಪ್ರದಾಯಿಕ ಆಚರಣೆಗೆ ಕಡಿಮೆ ಖರೀದಿ ಮಾಡುತ್ತಿದ್ದಾರೆ. ವ್ಯಾಪಾರ ಕೂಡ ಚೆನ್ನಾಗಿ ನಡೆಯುತ್ತಿದೆ ಎಂದು ಬೇವು-ಬೆಲ್ಲದ ವ್ಯಾಪಾರಿ ನಾಗೇಶ ಸವಣೂರ ಹೇಳಿದರು.ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಹಬ್ಬದ ಹಿಂದಿನ ದಿನ ಮಧ್ಯರಾತ್ರಿ ವರೆಗೂ ಗ್ರಾಹಕರು ಬರುತ್ತಾರೆ. ರಂಜಾನ್ ಹಬ್ಬದ ಪ್ರಯುಕ್ತ ಅಗತ್ಯ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಡ್ರೈಪ್ರೂಟ್ಸ್ ವ್ಯಾಪಾರಿ ಜಾಫರ್ ಅಗಸಿಬಾಗಿಲ ಹೇಳಿದರು.