ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಮುಂಬರುವ ದಿನಗಳಲ್ಲಿ ಬರಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಅಲ್ಪಾವಧಿ ಹಾಗೂ ದೀರ್ಘಾವಧಿ ತಳಿಯ ಮೇವು ಉತ್ಪಾದನೆಯನ್ನು ಬೇಡಿಕೆಗೆ ಅನುಗುಣವಾಗಿ ರೈತರು ಹುಲ್ಲನ್ನು ಬೆಳೆಯಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ನೀಡಿದರು.
ಪ್ರಸ್ತುತ ಮಳೆಗಾಲದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ವಾಡಿಕೆಗಿಂತ ಕಡಿಮೆ ಮಳೆ ಬೀಳುತ್ತಿದ್ದು, ಮುಂದಿನ ದಿನಗಳಲ್ಲಿ ಬರಪರಿಸ್ಥಿತಿ ಉಂಟಾಗುವ ಸಾಧ್ಯತೆಗಳು ಇವೆ. ಜಿಲ್ಲೆಯಲ್ಲಿ ಪ್ರಸ್ತುತ ಮುಂಬರುವ 42 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಆದರೆ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಮೇವಿನ ಪ್ರಮಾಣ ಇತರೆ ತಾಲೂಕುಗಳಿಗೆ ಹೋಲಿಸಿದ್ದಲ್ಲಿ ಕಡಿಮೆ ಇದೆ. ಕುಂದಾಪುರ ತಾಲೂಕಿನಲ್ಲಿಯೇ ಹೆಚ್ಚು ರಾಸುಗಳು ಇವೆ. ಈ ಭಾಗದಲ್ಲಿ ಮೇವಿನ ಬೇಡಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಹಾಗೂ ಸುಸ್ಥಿರ ಮೇವು ಉತ್ಪಾದನೆಗೆ ಮೇವು ಬೆಳೆ ಪ್ರದೇಶವನ್ನು ವಿಸ್ತರಿಸಲು ಹಾಗೂ ವಿವಿಧ ಮೂಲಗಳಿಂದ ಮೇವಿನ ಉತ್ಪಾದನೆಯನ್ನು ಹೆಚ್ಚಿಸಲು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇತ್ತೀಚಿನ ಜಾನುವಾರು ಗಣತಿಯಂತೆ 1,96,905 ರಾಸುಗಳು, 3178 ಆಡು ಕುರಿಗಳಿವೆ. ಮುಂಬರುವ ದಿನಗಳಲ್ಲಿ ಬರಘೋಷಣೆಯಾದ ತಾಲೂಕುಗಳಲ್ಲಿ ಮೇವಿನ ಕಿಟ್‌ಗಳನ್ನು ವಿತರಿಸುವಾಗ ಜಾನುವಾರುಗಳ ಸಂಖ್ಯೆ, ನೀರಾವರಿ ಸೌಲಭ್ಯಗಳನ್ನು ಪರಿಗಣಿಸಿ, ಸಣ್ಣ, ಅತೀಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲು ಮುಂದಾಗಬೇಕು ಎಂದರು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕೆಎಂಎಫ್ ವತಿಯಿಂದ 22670 ಕೆ.ಜಿ. ಯಷ್ಟು ಹೈಬ್ರಿಡ್ ಜೋಳವನ್ನು ಸಹಾಯಧನದೊಂದಿಗೆ, 3778 ಮಿನಿಕಿಟ್‌ಗಳು ಹಾಗೂ 3991.57 ಮೆ.ಟನ್ ಗಳನ್ನು ರಾಸುಮೇವುಗಳನ್ನು ವಿತರಿಸಲಾಗಿದೆ ಎಂದರು. ಜಿಲ್ಲೆಯಲ್ಲಿನ ಹೆಬ್ರಿ ತಾಲೂಕಿನ ಕೆರೆಬೆಟ್ಟು ಹಾಗೂ ಕಾಪು ತಾಲೂಕು ಎಲ್ಲೂರಿನಲ್ಲಿ ಗೋಶಾಲೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದ ಡಿಸಿ ಅವರು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಆಧ್ಯತೆಯ ಮೇಲೆ ಪೂರ್ಣಗೊಳಿಸಲು ಸೂಚನೆ ನೀಡಿದರು.ಜಿಲ್ಲೆಯ ಕಾಪು, ಉಡುಪಿ, ಬೈಂದೂರು, ಹೆಬ್ರಿ, ಕುಂದಾಪುರ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕು ಮತ್ತು ಉಡುಪಿ ಪಾಲಿಕ್ಲಿನಿಕ್ ನಲ್ಲಿ ತಲಾ ಒಂದರಂತೆ 8 ಪಶು ಸಂಜೀವಿನಿ 1962 ಆಂಬುಲೆನ್ಸ್‌ಗಳಿದ್ದು, ಈ ವಾಹನಗಳ ಮೂಲಕ 2026 ರ ಏಪ್ರಿಲ್ ನಿಂದ ಜೂನ್ ವರೆಗೆ ಒಟ್ಟು 2500 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿರುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ತೊಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಕರ್ ನಾಯ್ಕ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.