15 ದಿನದೊಳಗೆ ಕೆಎಫ್‌ಡಿ ಸಮಗ್ರ ಸಮೀಕ್ಷೆ ವರದಿ ಸಿದ್ಧಪಡಿಸಿ

KannadaprabhaNewsNetwork | Published : Nov 26, 2023 1:15 AM

ಸಾರಾಂಶ

ಬಹಳ ಮುಖ್ಯವಾಗಿ ತಾಲೂಕು ಆರೋಗ್ಯಾಧಿಕಾರಿ, ಗ್ರಾಪಂ ಪಿಡಿಓ ಹಾಗೂ ವೆಟರನರಿ ಸಿಬ್ಬಂದಿಗಳು ಎಚ್ಚರ ವಹಿಸಬೇಕು. ಮಾತ್ರವಲ್ಲದೇ ಎಲ್ಲಾ ಇಲಾಖೆಗಳೂ ಇವರಿಗೆ ಸಹಕಾರ ನೀಡುವುದು ಅಗತ್ಯ. ಈ ಮೊದಲು ರೋಗ ಉಲ್ಬಣಗೊಂಡಿರುವ ಮತ್ತು ಜೀವಹಾನಿ ಸಂಭವಿಸಿರುವ ಪ್ರದೇಶದಲ್ಲಿ ನಿರಂತರ ಸಭೆ ನಡೆಸಬೇಕು. ಜನಪ್ರತಿನಿಧಿಗಳ ಸಹಕಾರವನ್ನು ಪಡೆದು ಗ್ರಾಪಂ ಮಟ್ಟದಲ್ಲಿ ಆಗಾಗ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದು ಜನರ ಜೀವದ ಪ್ರಶ್ನೆಯಾಗಿದ್ದು. ಉದಾಸೀನತೆ ತೋರುವವರ ವಿರುದ್ಧ ಬಿಗಿ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದರು.

ಕನ್ನಡ ಪ್ರಭವಾರ್ತೆ ತೀರ್ಥಹಳ್ಳಿ ಈ ವರ್ಷ ಮಳೆ ಕಡಿಮೆ ಹಿನ್ನೆಲೆಯಲ್ಲಿ ಹವಾಮಾನದಲ್ಲಿ ಉಷ್ಣತೆ ಹೆಚ್ಚಿ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ತಾಂತ್ರಿಕ ಕಾರಣದಿಂದಾಗಿ ಈ ವರ್ಷ ಕೆಎಫ್‍ಡಿ ಚುಚ್ಚುಮದ್ದು ಕೂಡ ನೀಡಲಾಗುತ್ತಿಲ್ಲ. ಅಧಿಕಾರಿಗಳು ತಾಲೂಕಿನ ಮೂಲೆಮೂಲೆಗಳಿಗೆ ತೆರಳಿ ಸಮಗ್ರ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಾಕೀತು ಮಾಡಿದರು.

ಮಂಗನ ಖಾಯಿಲೆ ಕುರಿತಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಶುಕ್ರವಾರ ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವರ್ಷದ ಹವಾಮಾನ ಪರಿಸ್ಥಿತಿ ಗಂಭೀರವಾಗಿದೆ. ಯಾವುದೇ ಕ್ಷಣದಲ್ಲಿ ಮಂಗನ ಕಾಯಿಲೆ ಉಲ್ಬಣಗೊಳ್ಳುವ ಆತಂಕವಿದೆ. ಪರಿಸ್ಥಿತಿ ಕೈ ಮೀರುವ ಮುನ್ನವೇ ಎಚ್ಚರ ವಹಿಸುವುದು ಅಗತ್ಯ. ಇದು ಜನರ ಜೀವದ ಪ್ರಶ್ನೆಯಾಗಿದೆ. ಈ ಬಗ್ಗೆ ಇಂದಿನಿಂದ 15 ದಿನಗಳ ಒಳಗಾಗಿ ಸಮಗ್ರವಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ಹೇಳಿದರು.

ಬಹಳ ಮುಖ್ಯವಾಗಿ ತಾಲೂಕು ಆರೋಗ್ಯಾಧಿಕಾರಿ, ಗ್ರಾಪಂ ಪಿಡಿಓ ಹಾಗೂ ವೆಟರನರಿ ಸಿಬ್ಬಂದಿಗಳು ಎಚ್ಚರ ವಹಿಸಬೇಕು. ಮಾತ್ರವಲ್ಲದೇ ಎಲ್ಲಾ ಇಲಾಖೆಗಳೂ ಇವರಿಗೆ ಸಹಕಾರ ನೀಡುವುದು ಅಗತ್ಯ. ಈ ಮೊದಲು ರೋಗ ಉಲ್ಬಣಗೊಂಡಿರುವ ಮತ್ತು ಜೀವಹಾನಿ ಸಂಭವಿಸಿರುವ ಪ್ರದೇಶದಲ್ಲಿ ನಿರಂತರ ಸಭೆ ನಡೆಸಬೇಕು. ಜನಪ್ರತಿನಿಧಿಗಳ ಸಹಕಾರವನ್ನು ಪಡೆದು ಗ್ರಾಪಂ ಮಟ್ಟದಲ್ಲಿ ಆಗಾಗ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇದು ಜನರ ಜೀವದ ಪ್ರಶ್ನೆಯಾಗಿದ್ದು. ಉದಾಸೀನತೆ ತೋರುವವರ ವಿರುದ್ಧ ಬಿಗಿ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದರು.ತಾಂತ್ರಿಕ ಕಾರಣದಿಂದಾಗಿ ಈ ವರ್ಷ ಕೆಎಫ್‍ಡಿ ಚುಚ್ಚು ಮದ್ದು ನೀಡಲಾಗುತ್ತಿಲ್ಲಾ. ಬದಲಿಗೆ ಕಾಡಿಗೆ ಹೋಗುವವರಿಗೆ ಮೈಗೆ ಹಚ್ಚಿಕೊಳ್ಳಲು ಡಿಪಾ ಅಥವಾ ಡಿಎಂಪಿ ತೈಲವನ್ನು ಹಚ್ಚಿಕೊಳ್ಳುವಂತೆ ಜನರಿಗೆ ಸೂಚನೆ ನೀಡಬೇಕು. ಕಾಡಿನಲ್ಲೇ ಮನೆ ಮಾಡಿಕೊಂಡಿರುವವರ ಪ್ರತಿ ಮನೆಗಳಿಗೆ ಭೇಟಿ ನೀಡಿ ಎಚ್ಚರಿಸಬೇಕು. ಪರಿಸ್ಥಿತಿ ಕೈ ಮೀರುವ ಮುನ್ನವೇ ಎಚ್ಚರ ವಹಿಸುವುದು ಅಗತ್ಯ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿ ಯಾವುದೇ ರೀತಿಯ ಜ್ವರದ ಲಕ್ಷಣಗಳು ಕಂಡು ಬಂದರೆ ಅಸಡ್ಡೆ ತೋರಬಾರದು. ಅದರಲ್ಲೂ ಮುಖ್ಯವಾಗಿ ನಕಲಿ ವೈದ್ಯರ ಬಗ್ಗೆ ಎಚ್ಚರದೊಂದಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಔಷಧ ಕೊರತೆಯಾಗದಂತೆ ನೋಡಿಕೊಳ್ಳುವುದಲ್ಲದೇ ಔಷಧಿಗೆ ಹೊರಗೆ ಚೀಟಿ ಬರೆಯಕೂಡದು ಎಂದೂ ಹೇಳಿದರು.

ಸಭೆಯಲ್ಲಿ ತಹಸಿಲ್ದಾರ್ ಜಕ್ಕಣ್ಣನವರ್, ತಾಪಂ ಇಓ ಎಂ.ಶೈಲಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಕಿರಣ್, ಡಾ. ಹರ್ಷ, ತಾಲೂಕು ವೈಧ್ಯಾಧಿಕಾರಿ ಡಾ. ನಟರಾಜ್, ಪಶು ವೈಧ್ಯಾಧಿಕಾರಿ ಡಾ. ಮುರುಳೀಧರ್, ಬಿಇಓ ವೈ. ಗಣೇಶ್, ಮೇಗರವಳ್ಳಿ ವಲಯಾರಣ್ಯಾಧಿಕಾರಿಗಳಾದ ಮಧುಕರ್, ಮಂಡಗದ್ದೆ ಆರ್‍ಎಫ್‍ಓ ಆದರ್ಶ್, ವನ್ಯಜೀವಿ ವಿಭಾಗದ ಅರವಿಂದ್, ಪಪಂ ಸಿಓ ಕುರಿಯಾಕೋಸ್ ಸೇರಿದಂತೆ ತಾಲೂಕಿನ ಸರ್ಕಾರಿ ಇಲಾಖೆಯ ಎಲ್ಲ ಅಧಿಕಾರಿಗಳು ಇದ್ದರು.

- - - ಬಾಕ್ಸ್‌ಬೀಡಾಡಿ ಜಾನುವಾರು ಮಾಲೀಕರಿಗೆ ನೋಟಿಸ್‌ ಕೊಡಿ ತೀರ್ಥಹಳ್ಳಿ ಪಟ್ಟಣದಲ್ಲಿರುವ ಗೂಳಿಗಳಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಕುರಿತಂತೆ ಪತ್ರಕರ್ತರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಬಗ್ಗೆ ಪ.ಪಂ. ಮುಖ್ಯಾಧಿಕಾರಿಗೆ ಸೂಚನೆ ನೀಡಿದ ಡಿಸಿ, ಜಾನುವಾರುಗಳನ್ನು ಬೀದಿಗೆ ಬಿಡುತ್ತಿರುವವರಿಗೆ ಮುಲಾಜಿಲ್ಲದೇ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳಬೇಕು ಮತ್ತು ವಾರಸುದಾರರಿಲ್ಲದ ಗೂಳಿಗಳು ಮತ್ತು ಜಾನುವಾರುಗಳನ್ನು ಹಿಡಿದು ಹೊಸನಗರದ ಗೋ ಶಾಲೆಗೆ ಕಳಿಸುವಂತೆ ಆದೇಶಿಸಿದರು. ಪಟ್ಟಣದಲ್ಲಿರುವ ಕೆರೆಗಳ ಒತ್ತುವರಿ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ, ಉಳಿದ ಪ್ರದೇಶ ಒತ್ತುವರಿ ಆಗದಂತೆ ಸುತ್ತಲೂ ಬೇಲಿ ನಿರ್ಮಿಸುವಂತೆಯೂ ಸೂಚನೆ ನೀಡಿದರು.

- - - -24ಟಿಟಿಎಚ್‌02: ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದ ಮಂಗನ ಕಾಯಿಲೆ ಕುರಿತಂತೆ ಮುಂಜಾಗ್ರತಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಮಾತನಾಡಿದರು.

Share this article