ಕೇಂದ್ರ ಸ್ಕೀಂ ಅನುಷ್ಠಾನಕ್ಕೆ ತ್ರೈಮಾಸಿಕ ಕ್ರಿಯಾಯೋಜನೆ ಸಿದ್ಧಪಡಿಸಿ: ಸಂಸದ ಬ್ರಿಜೇಶ್ ಚೌಟ ಸೂಚನೆ

KannadaprabhaNewsNetwork |  
Published : Jun 23, 2025, 11:47 PM IST
2025-26ನೇ ಸಾಲಿನ ಬ್ಯಾಂಕ್‌ಗಳ ವಿಹಿವಾಟು ಗುರಿಯ ಮಾಹಿತಿ ಪತ್ರದ ಬಿಡುಗಡೆ  | Kannada Prabha

ಸಾರಾಂಶ

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಜಿ.ಪಂ. ಸಿಇಒ ಡಾ.ಆನಂದ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಲೀಡ್‌ ಬ್ಯಾಂಕ್‌ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇಂದ್ರ ಸರ್ಕಾರದ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಸ್ಕೀಮ್‌ಗಳ ಅನುಷ್ಠಾನಕ್ಕೆ ಸಂಬಂಧಿಸಿ ತ್ರೈಮಾಸಿಕ ಅವಧಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ದ.ಕ. ಜಿಲ್ಲೆಯ ಬ್ಯಾಂಕ್‌ ಮುಖ್ಯಸ್ಥರುಗಳಿಗೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೂಚನೆ ನೀಡಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಜಿ.ಪಂ. ಸಿಇಒ ಡಾ.ಆನಂದ್‌ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಲೀಡ್‌ ಬ್ಯಾಂಕ್‌ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಸ್ಕೀಮ್‌ಗಳ ಗುರಿ ಸಾಧಿಸುವಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಹಿನ್ನಡೆ ಕಂಡಿರುವ ಕುರಿತಂತೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಸಾಧಿಸುವ ಗುರಿಯ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಅದರ ವರದಿಯನ್ನು ನನಗೆ, ಜಿ.ಪಂ. ಸಿಇಒ, ಆರ್‌ಬಿಐ ಅಧಿಕಾರಿಗಳಿಗೆ ಸಲ್ಲಿಸುವಂತೆ ಅವರು ಹೇಳಿದರು.

ಜುಲೈನಲ್ಲಿ ಉದ್ಯಮ ಕಾರ್ಯಾಗಾರ:

ಪ್ರಧಾನಮಂತ್ರಿ ಜನಧನ್‌ ಯೋಜನೆ(ಪಿಎಂಜೆಡಿವೈ), ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಹಾಗೂ ಅಟಲ್‌ ಪಿಂಚಣಿ ಯೋಜನೆ (ಎಪಿವೈ) ಅನುಷ್ಠಾನ ಅಲ್ಲದೆಎಸ್‌ಸಿ ಎಸ್‌ಟಿ ಮಹಿಳಾ ಫಲಾನುಭವಿಗಳು ಹಾಗೂ ಸಣ್ಣ, ಅತೀ ಸಣ್ಣ, ಮಧ್ಯಮ ಉದ್ದಿಮೆದಾರರ (ಎಂಎಸ್‌ಎಂಇ) ಸೌಲ ಸೌಲಭ್ಯಕ್ಕೆ ಸಂಬಂಧಿಸಿ ಬ್ಯಾಂಕ್‌ಗಳು ಆದ್ಯತೆಯನ್ನು ನೀಡಬೇಕು. ಈ ಉದ್ದಿಮೆದಾರರಿಗೆ ಜುಲೈ ತಿಂಗಳಲ್ಲಿ ಮಂಗಳೂರಿನಲ್ಲಿ ಉದ್ಯಮ ತರಬೇತಿ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಮೂಗು ಮುರಿಯುವಂತೆ ಮಾಡಬೇಡಿ:

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಜಿ.ಪಂ.ಸಿಇಒ ಡಾ.ಆನಂದ್‌, ಬ್ಯಾಂಕ್‌ಗಳು ನಿಗದಿತ ಗುರಿ ಸಾಧನೆಗೆ ತೀವ್ರ ಪ್ರಯತ್ನ ನಡೆಸಬೇಕು. ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬಿಸಿದರೆ ಅಥವಾ ವೃಥಾ ತಿರಸ್ಕರಿಸಿದರೆ ಬ್ಯಾಂಕ್‌ಗಳ ಕಾರ್ಯವೈಖರಿ ಬಗ್ಗೆ ಗ್ರಾಹಕರು ಮೂಗು ಮುರಿಯುವಂತೆ ಆಗಬಹುದು. ಈ ಬಗ್ಗೆ ಬ್ಯಾಂಕ್‌ಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

2 ಲಕ್ಷ ರು. ಸಾಲಕ್ಕೆ ಗ್ಯಾರಂಟಿ ಬೇಡ:

ಸ್ವಸಹಾಯ ಸಂಘಗಳ ಸದಸ್ಯರಿಗೆ ವೈಯಕ್ತಿಕ ಸ್ವಉದ್ಯೋಗಕ್ಕೆ ಸಾಲ ನೀಡುವಾಗ ಬ್ಯಾಂಕ್‌ಗಳು 2 ಲಕ್ಷ ರು. ವರೆಗೆ ಯಾವುದೇ ಗ್ಯಾರಂಟಿಗೆ ಷರತ್ತು ಹಾಕುವಂತಿಲ್ಲ ಎಂದು ಆರ್‌ಬಿಐ ಸೂಚನೆ ನೀಡಿದೆ. ಹೀಗಿದ್ದೂ ಕೆಲವು ಬ್ಯಾಂಕ್‌ಗಳು ಕೊಟೇಷನ್‌ ಸಹಿತ ಗ್ಯಾರಂಟಿ ನೀಡುವಂತೆ ಷರತ್ತು ವಿಧಿಸಿ ಸಾಲ ನೀಡಿಕೆಯಲ್ಲಿ ವಿಳಂಬಕ್ಕೆ ಕಾರಣವಾಗಿದ್ದಾರೆ. ಈ ಕುರಿತು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡುವಂತೆ ಸಿಇಒ ಡಾ.ಆನಂದ್‌ ಅವರು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸುವ ಸ್ವಸಹಾಯ ಗುಂಪುಗಳಿಗೆ 10 ಲಕ್ಷ ರು. ವರೆಗೆ ಸಾಲ ನೀಡಲು ಅವಕಾಶ ಇದೆ ಎಂದು ನಬಾರ್ಡ್‌ ಡಿಜಿಎಂ ಸಂಗೀತಾ ತಿಳಿಸಿದರು.

2025-26 ಸಾಲ ಯೋಜನೆ ಬಿಡುಗಡೆ: ದ.ಕ ಜಿಲ್ಲೆಗೆ ಒಟ್ಟು 64506.99 ಕೋ.ರು.ಗಳ ಸಾಲ ಯೋಜನೆಯನ್ನು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಬಿಡುಗಡೆಗೊಳಿಸಿದರು. ಹಿಂದಿನ ಸಾಲಿನಲ್ಲಿ 53,532.3 ಕೋ.ರು.ಗಳ ಸಾಲ ಯೋಜನೆ ರೂಪಿಸಲಾಗಿತ್ತು. ಈ ಬಾರಿ ಕೃಷಿ ವಲಯಕ್ಕೆ 13,337.14 ಕೋ.ರು. ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 7,863.86 ಕೋಟಿ ರು. ಸಾಲ ನೀಡುವುದಕ್ಕೆ ಗುರಿ ಹಾಕಿಕೊಳ್ಳಲಾಗಿದೆ.

ಕೆನರಾ ಬ್ಯಾಂಕ್‌ ಡಿಜಿಎಂ ಶೈಲೇಂದ್ರ, ಆರ್‌ಬಿಐ ಎಜಿಎಂ ಅರುಣ್‌ ಇದ್ದರು.

----------------------ನಿಷ್ಕ್ರಿಯ ಖಾತೆ, ಖಾತೆ ವಂಚನೆ ನಿಗಾ ಸೂಚನೆ

ಮಾರ್ಚ್‌ ಅಂತ್ಯಕ್ಕೆ ದ.ಕ. ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,31,943.04 ಕೋಟಿ ರು. ಆಗಿದ್ದು, ವಾರ್ಷಿಕ ಶೇ. 8.48ರ ಬೆಳವಣಿಗೆ ದಾಖಲಿಸಿದೆ ಎಂದು ಲೀಡ್‌ ಬ್ಯಾಂಕ್‌ ಮೆನೇಜರ್‌ ಕವಿತಾ ಹೇಳಿದರು.

ಮಾರ್ಚ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ಬ್ಯಾಂಕ್‌ ಶಾಖೆಗಳ ಸಂಖ್ಯೆ 663 ಆಗಿದೆ. ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ಠೇವಣಿ 76,344.19 ಕೋಟಿ ರು. ಆಗಿದ್ದು, ಶೇ. 7.54 ಬೆಳವಣಿಗೆ ಕಂಡಿದೆ. ಒಟ್ಟು ಸಾಲ 55,595.5 ಕೋಟಿ ರು. ಆಗಿದ್ದು, ಶೇ.9.80ರ ಬೆಳವಣಿಗೆ ದಾಖಲಿಸಿದೆ. ಸಾಲದ ಠೇವಣಿ ಅನುಪಾತ ಶೇ.71.33 ಆಗಿದೆ ಎಂದರು.

ನಿಷ್ಕ್ರಿಯ ಇರುವ ಖಾತೆಗಳನ್ನು ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ ಖಾತೆಗಳ ವಂಚನೆ ಬಗ್ಗೆ ನಿಗಾ ವಹಿಸಿ ಅದರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಇಒ ಡಾ.ಆನಂದ್‌ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ