ಅರ್ಹ ಮತದಾರರು ಹೊರಗುಳಿಯದಂತೆ ಮತಪಟ್ಟಿ ಸಿದ್ಧಪಡಿಸಿ: ಡಾ.ಆನಂದ. ಕೆ

KannadaprabhaNewsNetwork |  
Published : Aug 07, 2026, 03:15 AM IST
ಅರ್ಹ ಮತದಾರರು ಹೊರಗುಳಿಯದಂತೆ ಪಾರದರ್ಶಕ ಮತಪಟ್ಟಿ ಸಿದ್ಧಪಡಿಸಿ: ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ | Kannada Prabha

ಸಾರಾಂಶ

ವಿಜಯಪುರ : ಜಿಲ್ಲೆಯಲ್ಲಿ ಜೂನ್ 30ರಿಂದ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಪಾರದರ್ಶಕವಾಗಿ ಕೈಗೊಂಡು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರು ಸೇರ್ಪಡೆಯಾಗದಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಆನಂದ. ಕೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಜೂನ್ 30ರಿಂದ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯಂತ ಪಾರದರ್ಶಕವಾಗಿ ಕೈಗೊಂಡು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರು ಸೇರ್ಪಡೆಯಾಗದಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಆನಂದ. ಕೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕೇಸ್ವಾನ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಇಲಾಖಾಧಿಕಾರಿಗಳ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ​ಆಗಸ್ಟ್ 4ರವರೆಗೆ ಜಿಲ್ಲೆಯಲ್ಲಿ ಒಟ್ಟು 16,79,495 ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಆನ್‌ಲೈನ್ ಮೂಲಕ 4,069 ಮತದಾರರು ನಮೂನೆ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ 1,52, 859 ಶಾಶ್ವತವಾಗಿ ಸ್ಥಳಾಂತರಗೊಂಡವರು, 54,549 ಮೃತಪಟ್ಟವರು ಹಾಗೂ 63,602 ಗೈರುಹಾಜರಾದ ಅಥವಾ ಸಂಗ್ರಹಿಸಲಾಗದ ಮತದಾರರನ್ನು ಗುರುತಿಸಲಾಗಿದ್ದು, 29,623 ಹೊಸ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಮುದ್ದೇಬಿಹಾಳ, ದೇವರಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ವಿಜಯಪುರ ನಗರ, ನಾಗಠಾಣ, ಇಂಡಿ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಎಲ್‌ಒಗಳಿಂದ ಪ್ರಕ್ರಿಯೆ ಚುರುಕುಗೊಳಿಸಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

​ಗೈರುಹಾಜರ, ವಲಸೆ, ಮರಣ, ಡುಪ್ಲಿಕೇಟ್ ಮತ್ತು ಇತರೆ ಮತದಾರರ ಮಾಹಿತಿಯನ್ನು ಪ್ರತಿದಿನ ಜಿಲ್ಲೆಯ ಅಧಿಕೃತ ವೆಬ್‌ಸೈಟ್ https://vijayapura.nic.in ಹಾಗೂ ಪತ್ರಿಕಾ ಪ್ರಕಟಣೆಯ ಗೂಗಲ್ ಲಿಂಕ್‌ಗಳ ಮೂಲಕ ಪ್ರಚುರಪಡಿಸಲಾಗುತ್ತಿದೆ. ಈಗಾಗಲೇ ಗುರುತಿಸಲಾದ ಎಸ್‌ಡಿಡಿಒ ಪಟ್ಟಿಯನ್ನು 9 ಸೆಟ್‌ಗಳಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು, ಮತಗಟ್ಟೆ ಅಧಿಕಾರಿಗಳು, ಗ್ರಾಪಂ, ತಹಸೀಲ್ದಾರ್‌ ಹಾಗೂ ತಾಲೂಕು ಕಚೇರಿಗಳ ಪ್ರಕಟಣೆ ಫಲಕಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗುವುದು. ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ಈ ಪಟ್ಟಿ ಪರಿಶೀಲಿಸಿ, ಯಾವುದೇ ಅನುಮಾನಗಳಿದ್ದರೆ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದ್ದು, ಅಧಿಕಾರಿಗಳು ಮರುಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ. ಚುನಾವಣೆ ಆಯೋಗದ ವೇಳಾಪಟ್ಟಿಯಂತೆ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗೆ ಆಗಸ್ಟ್ 17 ರಿಂದ ಸೆ.16ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಹ ಮತದಾರರು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ನಮೂನೆ-6 ಭರ್ತಿ ಮಾಡಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬಹುದು. ಅಲ್ಲದೆ, ಮುಂಬರುವ ಅಕ್ಟೋಬರ್‌ 1ಕ್ಕೆ 18 ವರ್ಷ ತುಂಬುವ ಯುವ ಮತದಾರರು ಸಹ ನಮೂನೆ-6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ. ನೀಡಲಾಗಿರುವ ಚುನಾವಣೆ ನೋಟಿಸ್ ಒಂದು ತಿಳಿವಳಿಕೆ ಪತ್ರವಾಗಿದ್ದು, ಮತದಾರರು ಗಣತಿ ನಮೂನೆಯ ಹಿಂಬದಿಯಲ್ಲಿ ಸೂಚಿಸಲಾದ ಯಾವುದಾದರೂ ಒಂದು ಅಗತ್ಯ ದಾಖಲೆ ನೀಡಿ ಹೆಸರನ್ನು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಸಭೆಯಲ್ಲಿ ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ವಿಡಿಎ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಯೋಜನಾ ನಿರ್ದೇಶಕ ಬದ್ರುದ್ದಿನ್‌ ಸೌದಾಗರ, ತಹಸೀಲ್ದಾರ್‌ ಪ್ರಶಾಂತ ಚನಗೊಂಡ, ಚುನಾವಣೆ ತಹಸೀಲ್ದಾರ್‌ ಸಚ್ಚಿದಾನಂದ ತೇರದಾಳ ಸೇರಿ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವ ರೀತಿಯಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ
ಬೆಳೆಗೆ ಜೀವತಂದ ಮಳೆ, ರೈತರಲ್ಲಿ ಹರ್ಷದ ಹೊಳೆ