ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 30ಕ್ಕೂ ಹೆಚ್ಚು ಸಾಧಕರನ್ನು ಅಭಿನಂದಿಸಬೇಕು ಎಂದರು.
ಶಾಲಾ ಮಕ್ಕಳಿಗೆ ಸಂವಿಧಾನ ಕುರಿತಾಗಿ ಆಶುಭಾಷಣೆ ಸ್ಪರ್ಧೆ, ದೇಶದ ಸಂವಿಧಾನದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಇರಬೇಕು. ಗ್ರಾಪಂ ಹಾಗೂ ಪುರಸಭೆಯಿಂದ ಹಕ್ಕು ಪತ್ರ, ಇ-ಸ್ವತ್ತುಗಳ ಫಲಾನುಭವಿಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.ಬೆಳಗ್ಗೆ 7-30ಕ್ಕೆ ಪುರಸಭೆ ಕಚೇರಿಯಲ್ಲಿ ಧ್ವಜಾರೋಹಣ, ನಂತರ ಮಕ್ಕಳನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬತ್ತೇರಿ ವರೆಗೆ ಮೆರವಣಿಗೆ ನಡೆಸಿ ಐತಿಹಾಸಿಕ ಬತೇರಿಯಲ್ಲಿ ತಹಸೀಲ್ದಾರ್ ಅವರಿಂದ ಧ್ವಜಾರೋಹಣ ಕಾರ್ಯ ನಡೆಸಬೇಕು. ಆನಂತರ ತಾಲೂಕು ಕ್ರೀಡಾಂಗಣಕ್ಕೆ ಮಕ್ಕಳು ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಎಂದರು.
ರೈತರಿಗೆ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.21 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗಗಳನ್ನು ಗುರುತಿಸಿ ಪಂಚಾಯ್ತಿ ವಶದಲ್ಲಿರಬೇಕು. ಪಟ್ಟಣ ಪುರಸಭೆ ಸೇರಿದಂತೆ ಸರ್ಕಾರಿ ಜಾಗ ಒತ್ತುವರಿ ತೆರವು ಮಾಡಿಸಿ ಆ ಜಾಗಗಳಿಗೆ ನಿವೇಶನ-ವಸತಿ ಇಲ್ಲದವರಿಗೆ ಹಕ್ಕು ಪತ್ರ ನೀಡಲು ಮುಂದಾಗಬೇಕು ಎಂದರು.
ತಹಸೀಲ್ದಾರ್ ಹಾಗೂ ತಾಪಂ ಇಒ ಅವರ ಸಲಹೆಗಳ ಪಡೆದು ಎಲ್ಲಾ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮಗಳ ನಡೆಸಿ ಫಲಾನುಭವಿಗಳಿಗೆ ನಿವೇಶನ ಹಂಚಲು ಕ್ರಮ ವಹಿಸಬೇಕು. ಪ್ರತಿ ಹೋಬಳಿಗಳಲ್ಲಿ ಕನಿಷ್ಠ 500 ಮಂದಿಗೆ ಇ-ಸ್ವತ್ತುಗಳ ದಾಖಲೆಗಳನ್ನು ನೀಡಲು ಸಹಕಾರ ನೀಡಿ ಎಂದು ಸೂಚಿಸಿದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಚೇತನಾಯಾದವ್, ತಾಪಂ ಇಒ ವೇಣು ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಪಂ ಪಿಡಿಒಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.