ಶ್ರೀ ಕಂಬದ ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ

KannadaprabhaNewsNetwork |  
Published : Aug 11, 2025, 12:30 AM IST
೯ಕೆಎಂಎನ್‌ಡಿ-೨ಮಂಡ್ಯ ತಾಲೂಕಿನ ಶ್ರೀ ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರೀ ಕಂಬದ ನರಸಿಂಹಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು. | Kannada Prabha

ಸಾರಾಂಶ

ಮೂರನೇ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲೆಯ ಎಲ್ಲ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಜರುಗಿದವು. ಮಂಡ್ಯ ತಾಲೂಕಿನ ಸಾತನೂರು ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೂರನೇ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲೆಯ ಎಲ್ಲ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಿರ್ವಿಘ್ನವಾಗಿ ಜರುಗಿದವು.

ತಾಲೂಕಿನ ಸಾತನೂರು ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ಶ್ರೀ ನರಸಿಂಹಸ್ವಾಮಿ ವಿಗ್ರಹಕ್ಕೆ ಹಲವು ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ವಾಮಿಯ ದೇವಾಲಯದ ಹಿಂಭಾಗದಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ೧೦., ೨೦., ೧೦೦., ೫೦೦. ರು. ಗಳ ನೋಟಿನಲ್ಲಿ ಮಾಡಲಾಗಿದ್ದ ವಿಶೇಷ ಅಲಂಕಾರ ಭಕ್ತರೆಲ್ಲರ ಗಮನ ಸೆಳೆಯಿತು.

ಇನ್ನು ಪೂಜೆಗೆ ಬಂದಿದ್ದ ಭಕ್ತರಿಗೆ ದೇವಾಲಯದ ಸಮಿತಿ ವತಿಯಿಂದ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಸಾತನೂರು ಬೆಟ್ಟ ಎಂದೇ ಹೆಸರಾಗಿರುವ ಇಲ್ಲಿ ಪ್ರತಿ ಶ್ರಾವಣ ಶನಿವಾರದಂದು ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಭಕ್ತರ ದಂಡು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.

ನಗರದ ಪ್ರಮುಖ ದೇವಾಲಯಗಳಲ್ಲೊಂದಾದ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿ ದೇವಾಲಯ, ಶ್ರೀಶ್ರೀನಿವಾಸ ದೇವಾಲಯ, ಹೊಸಹಳ್ಳಿ ಬಡಾವಣೆಯ ಶ್ರೀ ಶ್ರೀನಿವಾಸ ದೇವಾಲಯ, ಭೋವಿ ಕಾಲೋನಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯ, ನಗರದ ಮೈಸೂರು- ಬೆಂಗಳೂರು ಹೆದ್ದಾರಿ ಕಲ್ಲಹಳ್ಳಿಯ ಆಂಜನೇಯ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಭಕ್ತರ ದಂಡು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು.

ಸುಬ್ಬರಾಯ ಛತ್ರದಲ್ಲಿ ಉಪಾಕರ್ಮ

ಕಿಕ್ಕೇರಿ: ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಸುಬ್ಬರಾಯ ಛತ್ರದಲ್ಲಿ ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಉಪಕರ್ಮ ಹಾಗೂ ವಿವಿಧ ಪೂಜಾ ವಿಧಿ, ವಿಧಾನಗಳನ್ನು ಸಡಗರದಿಂದ ಆಚರಿಸಿದರು. ವೇದಬ್ರಹ್ಮ ಅನಿಲ್‌ ಶಾಸ್ತ್ರೀ ಮಾರ್ಗದರ್ಶನದಲ್ಲಿ ಋಗ್ವೇದಿಗಳು ಸಾಮೂಹಿಕವಾಗಿ ಯಜ್ಞೋಪವಿತ(ಜನಿವಾರ) ಬದಲಾಯಿಸಿಕೊಂಡರು. ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಋಗ್ವೇದಿಗಳು ಹಾಗೂ ಹುಣ್ಣಿಮೆಯಲ್ಲಿ ಯರ್ಜುವೇದಿಗಳು ಹೊಸದಾಗಿ ಯಜ್ಞೋಪಧಾರಣೆ ಮಾಡುವ ಕ್ರಿಯೆ ಇದ್ದು, ಈ ಬಾರಿ ಶ್ರವಣ ನಕ್ಷತ್ರ, ಹುಣ್ಣಿಮೆ ಎರಡೂ ದಿನಗಳು ಒಟ್ಟಿಗೆ ಸೇರಿ ಅತ್ಯಂತ ಪವಿತ್ರ ದಿನವೆಂದು ಎರಡು ವೇದಿಧಾರಿಗಳು ಯಜ್ಞೋಪವಿತಧಾರಣೆ ಮಾಡಲು ಮುಂದಾದರು. ಸಪ್ತಋಷಿಗಳಾದ ಗೌತಮ, ಅತ್ರೇಯ, ಭಾರಧ್ವಜ, ಕಶ್ಯಪ, ಜಮಧಗ್ನಿ, ವಸಿಷ್ಠ, ವಿಶ್ವಾಮಿತ್ರ ಮಹರ್ಷಿಗಳನ್ನು ಪೂಜಿಸಲಾಯಿತು. ಹೋಮ ಹವನಾದಿಗಳನ್ನು ಹಮ್ಮಿಕೊಂಡು ವಿವಿಧ ಫಲತಾಂಬೂಲ, ನೈವೇದ್ಯಗಳನ್ನು ಹೋಮಕ್ಕೆ ಅರ್ಪಿಸಿ ಋಷಿವರ್ಯರನ್ನು ಅವಾಹನೆ ಮಾಡಿಕೊಳ್ಳಲಾಯಿತು.

ಪಿತೃಗಳಿಗೆ ತರ್ಪಣ ಸಮರ್ಪಿಸಿದರು. ಮಹಾಮಂಗಳಾರತಿ ತೀರ್ಥ ಪ್ರಸಾದ ಸ್ವೀಕರಿಸಿದರು. ಪೂಜಾ ಪುಷ್ಪ, ಅರಿಷಿಣ, ಕುಂಕುಮ, ಹಳೆಯದಾದ ಯಜ್ಞೋಪವಿತವನ್ನು ಗಂಗೆಗೆ ವಿಸರ್ಜಿಸಿದರು.

ಈ ವೇಳೆ ಕೆ.ಬಿ. ವೆಂಕಟೇಶ್, ಶ್ರೀಹರಿ, ಮಹಾಬಲಶರ್ಮ, ಪ್ರಭಾಕರ್, ಅನಂತಸ್ವಾಮಿ, ಮಹಾಬಲರಾವ್, ಕೆ.ಎಸ್. ಪರಮೇಶ್ವರಯ್ಯ, ರಘು, ಚಂದ್ರಶೇಖರಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು