ಉಣಕಲ್‌ ಕೆರೆ ಉಳಿಸಿ ಜನಾಂದೋಲನಕ್ಕೆ ಸಿದ್ಧತೆ

KannadaprabhaNewsNetwork |  
Published : Nov 11, 2023, 01:19 AM ISTUpdated : Nov 11, 2023, 01:20 AM IST
ಕೆರೆ | Kannada Prabha

ಸಾರಾಂಶ

ಬರೋಬ್ಬರಿ 240 ಎಕರೆ ಪ್ರದೇಶದಲ್ಲಿ ಈ ಕೆರೆ ವ್ಯಾಪಿಸಿದೆ. ಹುಬ್ಬಳ್ಳಿ- ಧಾರವಾಡದ ಮಧ್ಯದಲ್ಲಿರುವ ಈ ಕೆರೆ ಮಹಾನಗರದ ಸೌಂದರ್ಯ ಹೆಚ್ಚಿಸಲು ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಕೆರೆಯ ಸುತ್ತಮುತ್ತಲಿನ ಬಡಾವಣೆ, ಅಚ್ಚುಕಟ್ಟು ಪ್ರದೇಶಗಳಲ್ಲಿನ ಬಡಾವಣೆಗಳ ಚರಂಡಿ ನೀರೆಲ್ಲ ಕೆರೆಗೆ ಸೇರ್ಪಡೆಯಾಗುತ್ತಿದೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಐತಿಹಾಸಿಕ ಹಿನ್ನೆಲೆಯ ಇಲ್ಲಿನ ಉಣಕಲ್‌ ಕೆರೆಗೆ ಚರಂಡಿ ನೀರು ಸೇರದಂತೆ ಬರೋಬ್ಬರಿ ₹15 ಕೋಟಿಗೂ ಅಧಿಕ ದುಡ್ಡು ಖರ್ಚಾದರೂ ಪ್ರಯೋಜನವಾಗಿಲ್ಲ. ಇದರಿಂದ ಕೆರೆ ದಿನದಿಂದ ದಿನಕ್ಕೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ದುರ್ನಾತ ಬೀರುತ್ತಿದೆ. ಹೀಗಾಗಿ, ಕೆರೆ ಉಳಿಸಲು ಈ ಭಾಗದ ಜನತೆ ಜನಾಂದೋಲನ ನಡೆಸಲು ಸದ್ದಿಲ್ಲದೇ ಸಿದ್ಧತೆ ನಡೆಸಿದ್ದಾರೆ.

12 ಶತಮಾನದಲ್ಲಿ ಚನ್ನಬಸವಣ್ಣ ಉಳಿವಿಗೆ ಹೋಗುವಾಗ ಇಲ್ಲಿ ತಂಗಿ ಒಂದು ದಿನ ವಿಶ್ರಾಂತಿ ಪಡೆದಿದ್ದರು. ಜತೆಗೆ ಇಲ್ಲೊಂದು ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ಈ ಕಾರಣಕ್ಕಾಗಿ ಇದನ್ನು ಚನ್ನಬಸವ ಕೆರೆ ಎಂದು ಕೂಡ ಕರೆಯಲಾಗುತ್ತಿದೆ.

ಈ ಕೆರೆಯ ನೀರನ್ನು ಮೊದಲು ಹುಬ್ಬಳ್ಳಿಗೆ ಸರಬರಾಜು ಮಾಡಲಾಗುತ್ತಿತ್ತು. ಸರ್‌.ಎಂ. ವಿಶ್ವೇಶ್ವರಯ್ಯ ಆಗಮಿಸಿ ಈ ಕೆರೆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಹೇಳಿದ್ದರು. ಅದನ್ನು ಯಾವ ರೀತಿ ಸರಬರಾಜು ಮಾಡಬೇಕು ಎಂಬ ಬಗ್ಗೆ ಸಲಹೆ ಮಾಡಿದ್ದರು. ಆಗಲೇ ಇಲ್ಲಿನ ನೃಪತುಂಗ ಬೆಟ್ಟದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಸ್ಥಾಪಿಸಲಾಗಿತ್ತು. ಕೆರೆಯಿಂದ ಅಲ್ಲಿಗೆ ಅಲ್ಲಿಂದ ನಗರಕ್ಕೆ ನೀರು ಸರಬರಾಜು ಆಗುತ್ತಿತ್ತು.

ಬರೋಬ್ಬರಿ 240 ಎಕರೆ ಪ್ರದೇಶದಲ್ಲಿ ಈ ಕೆರೆ ವ್ಯಾಪಿಸಿದೆ. ಹುಬ್ಬಳ್ಳಿ- ಧಾರವಾಡದ ಮಧ್ಯದಲ್ಲಿರುವ ಈ ಕೆರೆ ಮಹಾನಗರದ ಸೌಂದರ್ಯ ಹೆಚ್ಚಿಸಲು ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಕೆರೆಯ ಸುತ್ತಮುತ್ತಲಿನ ಬಡಾವಣೆ, ಅಚ್ಚುಕಟ್ಟು ಪ್ರದೇಶಗಳಲ್ಲಿನ ಬಡಾವಣೆಗಳ ಚರಂಡಿ ನೀರೆಲ್ಲ ಕೆರೆಗೆ ಸೇರ್ಪಡೆಯಾಗುತ್ತಿದೆ. ಉಣಕಲ್‌ ಕೆರೆಯ ಹಿಂಭಾಗದಲ್ಲಿನ ವೀರಭದ್ರಕಾಲನಿ, ಸಂಗೊಳ್ಳಿ ರಾಯಣ್ಣನಗರ, ನವನಗರ ಸೇರಿದಂತೆ ವಿವಿಧ ಬಡಾವಣೆಗಳಿಂದ ಒಳಚರಂಡಿ ನೀರು ಸೇರುತ್ತಲೇ ಇದೆ.

ಇದರಿಂದಾಗಿ ಕೆರೆಯ ನೀರು ದುರ್ನಾತ ಬೀರುತ್ತಿದೆ. ಇದರಿಂದ ಕೆರೆಯ ಅಂದಕ್ಕೂ ಹೊಡೆತ ಬೀಳುತ್ತಿದೆ. ಇದು ಈಗಿನ ಸಮಸ್ಯೆಯಲ್ಲ. ಕಳೆದ ಹಲವು ದಶಕಗಳಿಂದ ಚರಂಡಿ ನೀರು ಸೇರ್ಪಡೆಯಾಗುತ್ತಲೇ ಇದೆ.

ಪಾಲಿಕೆ ಮಾಡಿದ್ದೇನು?

ಮಹಾನಗರ ಪಾಲಿಕೆ 2008ರಿಂದ ಈವರೆಗೂ ಬರೋಬ್ಬರಿ ₹15 ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಎಸ್‌ಟಿಪಿ ಪ್ಲ್ಯಾಂಟ್‌ ನಿರ್ಮಿಸಿದೆ. ಆದರೂ ಚರಂಡಿ ನೀರು ಸೇರುವುದು ಮಾತ್ರ ನಿಂತಿಲ್ಲ.

ಜನಾಂದೋಲನಕ್ಕೆ ಸಿದ್ಧತೆ:

ಉಣಕಲ್‌ ಕೆರೆ ನಮ್ಮ ಭಾಗಕ್ಕೆ ಜೀವನಾಡಿ. ಇದನ್ನು ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಜನಾಂದೋಲನ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಉಣಕಲ್‌ ಕೆರೆಯನ್ನು ಉಳಿಸಿ ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಬಹುದು. ಜತೆಗೆ ವಾಟರ್‌ ಗೇಮಿಂಗ್‌ಗಳನ್ನು ಏರ್ಪಡಿಸಿದರೆ ಅದರಿಂದ ಪಾಲಿಕೆಗೂ ಆದಾಯ ಬರುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆ ಯೋಜನೆ ರೂಪಿಸಬೇಕು. ಅದನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಜನಾಂದೋಲನ ರೂಪಿಸುವ ಯೋಚನೆಯಿದೆ ಎಂದು ಇಲ್ಲಿನ ಪ್ರಜ್ಞಾವಂತರು ತಿಳಿಸುತ್ತಾರೆ.

ಒಟ್ಟಿನಲ್ಲಿ ಉಣಕಲ್‌ ಕೆರೆ ಉಳಿವಿಗೆ ಜನಾಂದೋಲನ ನಡೆಸಲು ಸಣ್ಣದಾಗಿ ಸಿದ್ಧತೆ ನಡೆದಿರುವುದಂತೂ ಸತ್ಯ. ಇನ್ಮೇಲಾದರೂ ಪಾಲಿಕೆ ಚರಂಡಿ ನೀರು ಕೆರೆಯೊಳಗೆ ಹೋಗದಂತೆ ನೋಡಿಕೊಳ್ಳಬೇಕಿದೆ.

ಉಣಕಲ್‌ ಕೆರೆ ಅಂಗಳದಲ್ಲೇ ನಾವೆಲ್ಲ ಆಟವಾಡಿ ಬೆಳೆದವರು. ಆದರೆ, ಚರಂಡಿ ನೀರು ಸೇರಬಾರದೆಂಬ ಉದ್ದೇಶದಿಂದ ಪಾಲಿಕೆ ₹15 ಕೋಟಿಗೂ ಅಧಿಕ ಹಣವನ್ನು ಕಳೆದ ಹಲವು ವರ್ಷಗಳಿಂದ ಖರ್ಚು ಮಾಡಿದೆ. ಆದರೆ ಚರಂಡಿ ನೀರು ಸೇರುವುದು ಮಾತ್ರ ಇನ್ನು ನಿಂತಿಲ್ಲ. ಈ ಕಾರಣದಿಂದ ಕೆರೆ ಉಳಿಸಲು ಜನಾಂದೋಲನ ನಡೆಸಲಾಗುವುದು ಎನ್ನುತ್ತಾರೆ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ