ಸಾಮೂಹಿಕ ಯೋಗ ಪ್ರದರ್ಶನಕ್ಕೆ ಸಿದ್ಧತೆ

KannadaprabhaNewsNetwork | Published : Jun 18, 2024 12:48 AM

ಸಾರಾಂಶ

ದೊಡ್ಡಬಳ್ಳಾಪುರ: 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿನ ವಿಶ್ವ ಯೋಗ ದಿನಾಚರಣೆ ಟ್ರಸ್ಟ್‌ ನೇತೃತ್ವದಲ್ಲಿ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಬೃಹತ್‌ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಟ್ರಸ್ಟ್‌ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.

ದೊಡ್ಡಬಳ್ಳಾಪುರ: 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿನ ವಿಶ್ವ ಯೋಗ ದಿನಾಚರಣೆ ಟ್ರಸ್ಟ್‌ ನೇತೃತ್ವದಲ್ಲಿ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಬೃಹತ್‌ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಟ್ರಸ್ಟ್‌ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ 21ರಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಸುಮಾರು 3 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಿವಿಧ ವಲಯಗಳ ಯೋಗಾಸಕ್ತರ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬುದು 2024ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಘೋಷವಾಕ್ಯವಾಗಿದ್ದು, ವಿವಿಧ ಹಂತಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಈ ಬಾರಿ 10ನೇ ವರ್ಷವಾಗಿರುವುದು ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

ಪುಷ್ಪಾಂಡಜ ಮುನಿ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಪ್ರತಿವರ್ಷ ಯೋಗ ದಿನಾಚರಣೆಗೂ ಮುನ್ನ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಈ ಬಾರಿ ಕಾರಣಾಂತರಗಳಿಂದ ಶಿಬಿರ ಆಯೋಜನೆ ಸಾಧ್ಯವಾಗಿಲ್ಲ. ಸರಳ ಯೋಗಾಸನಗಳನ್ನು ಪ್ರತಿಯೊಬ್ಬರೂ ಮಾಡುವುದರಿಂದ ಆರೋಗ್ಯಕರ ಬದುಕು ಸಾಧ್ಯವಾಗುತ್ತದೆ ಎಂದರು.

ಟ್ರಸ್ಟ್‌ನ ಕಾರ್ಯದರ್ಶಿ ಬಿ.ಜಿ.ಅಮರನಾಥ್ ಮಾತನಾಡಿ, ಯೋಗಾಸಕ್ತರು ನಿಗದಿತ ಸಮಯಕ್ಕೆ ಕ್ರೀಡಾಂಗಣಕ್ಕೆ ಆಗಮಿಸುವ ಮೂಲಕ ಶಿಸ್ತು ಕಾಪಾಡಿಕೊಳ್ಳುವುದು ಅಗತ್ಯ. ವೇದಿಕೆ ಕಾರ್ಯಕ್ರಮ, ಸಾಮೂಹಿಕ ಯೋಗ ಪ್ರದರ್ಶನ ಬಳಿಕ ಉಪಾಹಾರ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವಿವರಿಸಿದರು.

ಟ್ರಸ್ಟ್‌ ಖಜಾಂಚಿ ಪಿ.ಕೆ.ಶ್ರೀನಿವಾಸ್, ಸದಸ್ಯರಾದ ಬಿ.ಎಲ್.ಸೀತಾರಾಮ್, ಡಿ.ವಿ.ಗಿರೀಶ್, ಡಿ.ಪಿ.ಗೋಪಾಲ್, ಬಿ.ಪಿ.ಸನಾತನಮೂರ್ತಿ, ಯಶೋದಾ, ದಾಕ್ಷಾಯಿಣಿ, ಪ್ರಿಯಾಂಕ, ಎ.ಕೆ.ರಮೇಶ್, ವೀಣಾ, ವತ್ಸಲಾ, ವಿನೋದ, ಗೀತಾ, ಶ್ರೀನಾಥ, ರಾಮು ಮತ್ತಿತರರು ಉಪಸ್ಥಿತರಿದ್ದರು.17ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ವಿಶ್ವ ಯೋಗ ದಿನಾಚರಣೆ ಟ್ರಸ್ಟ್‌ ಕೆ.ಎಂ.ಹನುಮಂತರಾಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಿವ್ಯಜ್ಞಾನಾನಂದ ಸ್ವಾಮೀಜಿ ಇತರರಿದ್ದರು.

Share this article