ಮುಂಡರಗಿ: ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಹೆಸರಾಗಿರುವ ಶ್ರೀ ಜ. ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳ ಚರಿತ್ರೆ ಒಳಗೊಂಡಿರುವ ಅನ್ನದಾನೀಶ್ವರ ಮಹಾತ್ಮೆ ಎನ್ನುವ ಭಕ್ತಿ ಪ್ರಧಾನ ಸಿನಿಮಾ ಚಿತ್ರೀಕರಣ ಜೂ. 20ರೊಳಗೆ ಪ್ರಾರಂಭವಾಗುವ ನಿಮಿತ್ತ ಮೇ 26 ರಂದು ಭಾನುವಾರ ಆಡಿಷನ್ ನಡೆಯಲಿದೆ ಎಂದು ಚಿತ್ರಕಥೆ ಹಾಗೂ ಸಂಭಾಷಣೆಕಾರ ಸಂಜಯ ಬೇವಿನಾಳ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಅನೇಕ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಶ್ರೀ ಅನ್ನದಾನೀಶ್ವರ ಮಠದ ಸೇವೆಯ ಪ್ರತೀಕವಾಗಿ ಈ ಮಠದಲ್ಲಿ ಆದ ಎಲ್ಲ ಪವಾಡ, 10 ಪೀಠಾಧಿಪತಿಗಳು ಹಾಗೂ ಅವರ ಚರಿತ್ರೆ ಒಳಗೊಂಡಿರುವ ಅನ್ನದಾನೀಶ್ವರ ಮಹಾತ್ಮೆ ಎನ್ನುವ ಸಿನಿಮಾ ಚಿತ್ರೀಕರಣದ ಮೂಲಕ ನಾವು ಈ ನಾಡಿಗೆ ಶ್ರೀಅನ್ನದಾನೀಶ್ವರ ಮಠದ ಚರಿತ್ರೆ ಗುರುತಿಸುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಅನ್ನದಾನೀಶ್ವರ ಮಹಾತ್ಮೆ ಚಿತ್ರೀಕರಣಕ್ಕೆ ಕಲಾವಿದರ ಅವಶ್ಯಕತೆ ಇರುವುದರಿಂದ ಮೇ 26 ರಂದು ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಕಲಾವಿದರಿಗೆ ಆಡಿಷನ್ ನಡೆಸಲಾಗುವುದು ಎಂದು ತಿಳಿಸಿದರು.ತಾವರಗೇರಿ ಮಠದ ಶ್ರೀಮಹೇಶ್ವರ ಶರಣರು ಮಾತನಾಡಿ, ಈ ಭಾಗದಲ್ಲಿ ಸಾಹಿತ್ಯ, ಸಂಸ್ಕೃತಿ ಕುರಿತು ಹಲವಾರು ಕಾದಂಬರಿ ಹಾಗೂ ಪುಸ್ತಕಗಳನ್ನು ಹೊರ ತಂದಿರುವ ಶ್ರೀಮಠದ ಚರಿತ್ರೆ ಒಳಗೊಂಡು ಚಿತ್ರೀಕರಣ ಮಾಡುತ್ತಿರುವ ಈ ಚಿತ್ರತಂಡವು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದೆ. ಇದನ್ನು ಬಹಳ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಚಿತ್ರೀಕರಣ ಮಾಡಲು ಸಲಹೆ ನೀಡಿದರು.
ಚಿತ್ರದ ನಿರ್ದೇಶಕಿ ಗೀತಶ್ರೀ ಮಾತನಾಡಿ, ಈ ನಾಡಿನಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ಈ ಮಠದ ಚರಿತ್ರೆ ಅಪಾರವಾಗಿದೆ. ಅಷ್ಟೇ ವಿಶೇಷವಾಗಿದೆ. ಸುಮಾರು ವರ್ಷಗಳ ಚರಿತ್ರೆಯನ್ನು ನಾವು ಈ ಕಥೆಯಲ್ಲಿ ಕಂಡಿದ್ದೇವೆ. ನಾವು ಈ ಸಿನೆಮಾ ನಿರ್ಮಾಣ ಮಾಡುವಲ್ಲಿ ತುಂಬಾ ಸಂತೋಷದಿಂದ ಮಾಡುತ್ತಿದ್ದೇವೆ. ಒಳ್ಳೆಯ ಭಕ್ತಿ ಪ್ರಧಾನವಾದ ಕಥೆ ಇದಾಗಿದೆ. ಹೀಗಾಗಿ ಭಾನುವಾರ ನಡೆಯುವ ಆಡಿಷನ್‌ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸ್ಥಳೀಯ ಕಲಾವಿದರಿಗೆ ಕೊಡಬೇಕೆನ್ನುವ ವಿಚಾರದಲ್ಲಿದ್ದೇವೆ. ಹೀಗಾಗಿ ಆಸಕ್ತ ಕಲಾವಿದರು ಮೇ 26 ರಂದು ನಡೆಯುವ ಆಡಿಷನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅನ್ನದಾನೀಶ್ವರ ಮಹಾತ್ಮೆ ಚಿತ್ರ ತಂಡಕ್ಕೆ ಸಹಕರಿಸಬೇಕೆಂದು ಎಂದು ಹೇಳಿದರು.ಈ ವೇಳೆ ಕ್ಯಾಮರಾಮನ್ ಶರಣು ಸುಗ್ನಳ್ಳಿ, ಪ್ರಕಾಶ ಹೂಗಾರ, ರವಿಗೌಡ ಪಾಟೀಲ್, ಶರಣಪ್ಪ ಹೊಂಬಳಗಟ್ಟಿ ಹಾಲೇಶ ಹೀರೇಮಠ ಇದ್ದರು.