ಕನ್ನಡಪ್ರಭ ವಾರ್ತೆ ಭಾರತೀನಗರ
ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರ ಸೇವೆ ಮರೆಯಲಾಗದು ಎಂದು ಅಂತಾರಾಷ್ಟ್ರೀಯ ಶಿಕ್ಷಣ ತಜ್ಞ ಹಾಗೂ ರಾಷ್ಟ್ರೀಯ ಕ್ರೀಡಾಪಟು ಎ.ಎಚ್.ಸಾಗರ್ ಹೇಳಿದರು.ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರೆ ಅದಕ್ಕೆ ಶಿಕ್ಷಕರೇ ಕಾರಣ. ಶಿಕ್ಷಕರು ಮಕ್ಕಳಿಗೆ ವಿದ್ಯೆ ಧಾರೆ ಎರೆದು ಸಮಾಜದ ಸತ್ಪ್ರಜೆಗಳನ್ನಾಗಿಸಲು ಶ್ರಮಿಸುತ್ತಿದ್ದಾರೆ. ಶಿಕ್ಷಕರು ಮಕ್ಕಳಿಗೆ ವಿದ್ಯೆಯೊಂದಿಗೆ ದೇಶಾಭಿಮಾನ, ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು. ಯುವಶಕ್ತಿ ದೇಶದಲ್ಲಿ ಶಾಂತಿ ತುಂಬುವ ಸಮಾಜ ನಿರ್ಮಾಣವಾಗಬೇಕು ಎಂದರು.
ದಿ.ಜಿ.ಮಾದೇಗೌಡರು ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆ ತೆರೆದು ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಮಾದೇಗೌಡರ ಹೆಸರು ಪ್ರಜ್ವಲಿಸಿದಂತೆ ಸಂಸ್ಥೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ದೇಶಕ್ಕೆ ಬೆಳಕು ಚೆಲ್ಲಿದ್ದಾರೆಂದು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಇದೇ ವೇಳೆ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಅವರಿಗೆ ಉತ್ತಮ ಅಧ್ಯಾಪಕಿ ಪ್ರಶಸ್ತಿ ನೀಡಿ 10 ಸಾವಿರರು., ಆರ್ಥಿಕವಾಗಿ ಹಿಂದುಳಿದಂತಹ ಅಧ್ಯಾಪಕರಾದ ಸರಿತಾ ಹಾಗೂ ಲಕ್ಷ್ಮಿನಾರಾಯಣ್ ಅವರಿಗೆ 25 ಸಾವಿರ ರು. ಧನ ಸಹಾಯ ನೀಡಿ ಅಭಿನಂದಿಸಲಾಯಿತು.ಕಾರ್ಯಕ್ರಮಕ್ಕೂ ಮೊದಲು ಡಾ.ಸರ್ವಪಲ್ಲಿ ರಾಧಕೃಷ್ಣ ಮತ್ತು ಜಿ.ಮಾದೇಗೌಡರ ಭಾವಚಿತ್ರಕ್ಕೆ ವೇದಿಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಉಪನ್ಯಾಸಕ ಬಿ.ಕೆ.ಮಹದೇವು ಅವರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗಕ್ಕೆ ಬರೆದ ಜೀವಶಾಸ್ತ್ರ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಭಾರತೀ ಸಂಸ್ಥೆ ಶಿಕ್ಷಕರಿಗೆ ಮತ್ತು ನೌಕರರಿಗೆ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಬಿಇಟಿ ಸಿಇಒ ಆಶಯ್ ಜಿ.ಮಧು, ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಟ್ರಸ್ಟಿ ಮುದ್ದಯ್ಯ, ಬಸವೇಗೌಡ, ಬಿಇಡಿ ಪ್ರಾಂಶುಪಾಲ ಎಸ್.ಎಲ್.ಸುರೇಶ್, ಪ್ರಾಧ್ಯಾಪಕ ಬಿ.ಕೆ.ಕೃಷ್ಣ, ಡಾ.ಮಹದೇವಸ್ವಾಮಿ, ಡಾಪುನೀತ್, ಜಿಎಂಐಟಿ ಪ್ರಾಧ್ಯಾಫಕಿ ಶೃತಿ ಸೇರಿದಂತೆ ವಿವಿಧ ಅಂಗಸಂಸ್ಥೆ ಮುಖ್ಯಸ್ಥರು ಉಪಸ್ಥಿತರಿದ್ದರು.