ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತೀರ್ಥಹಳ್ಳಿ, ಹೊಸನಗರ ಸಾಗರ ತಾಲೂಕುಗಳ ಸುಮಾರು 5000 ಎಕರೆ ದಟ್ಟ ಅರಣ್ಯ ಭೂಮಿ ಖಾಸಗಿಯವರ ಪಾಲಾಗಿ ನಾಶವಾಗುವುದನ್ನು ತಪ್ಪಿಸಬೇಕು. ಖಾತೆಕಾನು ಹೆಸರಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಇರುವ ಹತ್ತಾರು ಗಂಭೀರ ಪ್ರಕರಣಗಳಲ್ಲಿ ಸರ್ಕಾರ ಅರಣ್ಯ ಇಲಾಖೆ ಪರಿಣಾಮಕಾರಿ ವಾದ ಮಂಡಿಸದೇ ಸೋಲು ಅನುಭವಿಸುತ್ತಿದೆ. ಈ ಬಗ್ಗೆ ಕಳೆದ 6 ವರ್ಷಗಳಲ್ಲಿ ಮತ್ತೆ ಮತ್ತೆ ಶಿವಮೊಗ್ಗ ಅರಣ್ಯ ಇಲಾಖೆಗೆ, ರಾಜ್ಯ ಅರಣ್ಯ ಭವನದ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತಲೇ ಬರಲಾಗಿದೆ. ಕೂಡಲೇ ವಿಶೇಷ ಕಾನೂನು ಸೆಲ್ ಅಡಿ ರಾಜ್ಯ ಅರಣ್ಯ ಇಲಾಖೆ ಸಮರ್ಪಕ ತಯಾರಿ ನಡೆಸಿ ನ್ಯಾಯಾಲಯಗಳಲ್ಲಿ ಅರಣ್ಯ ಉಳಿಸಿ ಹೋರಾಟ ನಡೆಸಬೇಕು ಎಂದು ಪ್ರಬಲವಾಗಿ ಒತ್ತಾಯಿಸಿದೆ.
ತೀರ್ಥಹಳ್ಳಿ ತಾಲೂಕು ಭೀಮಸೇತು ಪ್ರಕರಣ, ಸಿಂಧುವಾಡಿ ಪ್ರಕರಣ, ಹಗಲತ್ತಿ ಕುಳ್ಳುಂಡೆ, ಹೆಮ್ಮಕ್ಕಿ ಹೊಸನಗರ ತಾಲೂಕು ಕಟ್ಟೆಕೊಪ್ಪ ಕಾನು ಅರಣ್ಯ ಪ್ರಕರಣ ಹಾಲಂದೂರು ಪ್ರಕರಣ ಮುಂತಾದ ಅರಣ್ಯ ಮೊಕದ್ದಮೆಗಳ ಬಗ್ಗೆ ಶಿವಮೊಗ್ಗ ವಿಭಾಗ ಅರಣ್ಯ ಅಧಿಕಾರಿಗಳ ನೇರ ಗಮನ ಸೆಳೆದಿದೆ, ಸಮಾಲೋಚನೆ ನಡೆಸಿದೆ.ಶಿವಮೊಗ್ಗ ಪರ್ಯಾವರಣ ಸಂಸ್ಥೆ ಪ್ರಮುಖರಾದ ಪ್ರೊ. ಬಿ.ಎಂ ಕುಮಾರಸ್ವಾಮಿ ಅವರು ಈ ಎಲ್ಲಾ ಗಂಭೀರ ನ್ಯಾಯಾಲಯದಲ್ಲಿರುವ ಅರಣ್ಯ ಪ್ರಕರಣಗಳ ಬಗ್ಗೆ ಪ್ರಜ್ಞಾವಂತ ಜನತೆಗೆ ಮಾಹಿತಿ ಇರುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯಗಳಲ್ಲಿ ಮೇಲುಗೈ ಪಡೆಯುತ್ತಿದ್ದಾರೆ. ಕಾನೂನು ಕಂದಾಯ ಇಲಾಖೆಗಳ ಜೊತೆಗೂ ಅರಣ್ಯ ಇಲಾಖೆ ಸಮನ್ವಯ ಇಟ್ಟುಕೊಂಡು ವ್ಯವಸ್ಥಿತವಾದ ವಾದ ಮಂಡಿಸಬೇಕು ಎಂದಿದ್ದಾರೆ.
ವೃಕ್ಷಲಕ್ಷ ಆಂದೋಲನದ ಸಂಚಾಲಕ ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ ಬಾಲಕೃಷ್ಣ ನಾಯ್ಡು ಮುಂತಾದವರು ನಿಯೋಗದಲ್ಲಿದ್ದರು.
ಯಾವ್ಯಾವ ಪ್ರಕರಣಗಳು
ಮಂಡಗದ್ದೆಯ ಕುಳ್ಳುಂಡೆ ಗ್ರಾಮದಲ್ಲಿ ಸುಮಾರು 105 ಎಕರೆ ಖಾತೆ ಕಾನು ಪ್ರಕರಣ, ಶೇಡಗಾರ, ಗ್ರಾಮದಲ್ಲಿ ಸುಮಾರು 110 ಎಕರೆ ಖಾತೆಕಾನು ಪಕರಣ, ಕುಡಗಲಮನೆ ಗ್ರಾಮದಲ್ಲಿ ಸುಮಾರು 120 ಎಕರೆ ಖಾತೆಕಾನು ಭೂಮಿ ಪ್ರಕರಣ, ಕೋಣಂದೂರು ಮಳಲಿ ಮಠ ಹತ್ತಿರದ ಜಂಬೇಕಾನು ಸುಮಾರು 270 ಎಕರೆ ಖಾತೆ ಕಾನು ಪ್ರಕರಣ, ಕೊಳಗಿಬೈಲ್ ಗ್ರಾಮದಲ್ಲಿ 135 ಎಕರೆ ಖಾತೆಕಾನು ಪ್ರಕರಣ, ಸಾಗರ ತಾಲೂಕು ಆನಂದಪುರ ಸಮೀಪ ಗಂಟಿನಕೊಪ್ಪದಲ್ಲಿ 90 ಎಕರೆ ಕಾನು ಪ್ರಕರಣ. ಶಿರವಂತೆ ಬಳಿ ಬರದವಳ್ಳಿ ಗ್ರಾಮದಲ್ಲಿ ಸುಮಾರು 240 ಎಕರೆ ಕತ್ತಲೆಕಾನು ಹೆಸರಲ್ಲಿ ಪ್ರಕರಣ, ಆನಂದಪುರ ಯಡೇಹಳ್ಳಿಯ ಅಡೂರು ಗ್ರಾಮದಲ್ಲಿ ಸುಮಾರು 160 ಎಕರೆ ಖಾತೆಕಾನು ಅರಣ್ಯ ಭೂಮಿ ಪ್ರಕರಣ ಇದೆ. ಈ ಎಲ್ಲ ಹಲವು ಪ್ರಕರಣಗಳಲ್ಲಿ ಭೂ ದಾಖಲೆ ಅಕ್ರಮ ತಿದ್ದುಪಡಿ ಮಾಡಿರುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿ ವಿವರ ನೀಡಲಾಗಿದೆ.
ಪೋಟೋ: 16ಎಸ್ಎಂಜಿಕೆಪಿ09