ಜಾತಿಗಣತಿ ವರದಿ ಮಂಡಿಸಿ ಅಂಗೀಕರಿಸಿ, ಆಮೇಲೆ ಚರ್ಚಿಸಿ

KannadaprabhaNewsNetwork | Published : Apr 16, 2025 12:40 AM

ಸಾರಾಂಶ

ದೇಶದಲ್ಲಿ ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಜಾತಿ ಜನಗಣತಿ ವರದಿಯನ್ನು ಏ.17ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅನುಷ್ಠಾನಗೊಳಿಸಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಶ್ರೀ ಪ್ರಣವಾನಂದ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಸಿಎಂ ಸಿದ್ದರಾಮಯ್ಯಗೆ ಇಕ್ಕಟ್ಟಿನಲ್ಲಿ ಸಿಲುಕಿಸಿ, ಡಿಕೆಶಿಗೆ ಸಿಎಂ ಮಾಡಲು ಹುನ್ನಾರ: ಪ್ರಣವಾನಂದ ಸ್ವಾಮೀಜಿ ಆರೋಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಜಾತಿ ಜನಗಣತಿ ವರದಿಯನ್ನು ಏ.17ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅನುಷ್ಠಾನಗೊಳಿಸಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಶ್ರೀ ಪ್ರಣವಾನಂದ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1931ರಲ್ಲಿ ಅಂದರೆ 91 ವರ್ಷಗಳ ನಂತರ ಜಾತಿ ಜನಗಣತಿ ರಾಜ್ಯದಲ್ಲಿ ಆಗಿದೆ. ಬರುವ ಕ್ಯಾಬಿನೆಟ್‌ ಸಭೆಯಲ್ಲಿ ವರದಿ ಮಂಡಿಸಿ, ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು ಎಂದರು.

ಜಾತಿ ಜನಗಣತಿ ವರದಿಯಲ್ಲಿ ತಪ್ಪು, ಲೋಪದೋಷ ಏನೇ ಇದ್ದರೂ ಅವುಗಳನ್ನು ನಂತರ ಸರಿಪಡಿಸಬಹುದು. ಮೊದಲು ವರದಿ ಮಂಡಿಸಿ, ಜಾರಿಗೆ ತರಲಿ. ಅನಂತರ ವರದಿಯಲ್ಲಿ ಶಿಫಾರಸು ಮಾಡಿರುವ ಅಂಶಗಳನ್ನು ಜಾರಿಗೆ ತರುವುದೋ, ಬಿಡುವುದೋ ಸರ್ಕಾರದ ಕೆಲಸ ಎಂದು ತಿಳಿಸಿದರು.

ಸುಮಾರು 1.35 ಲಕ್ಷ ಶಿಕ್ಷಕರು, 3500ಕ್ಕೂ ಹೆಚ್ಚು ಮೇಲ್ವಿಚಾರಕ ಅಧಿಕಾರಿಗಳು ಸತತ 6 ವಾರಗಳ ಕಾಲ ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಸಮೀಕ್ಷೆ ಮಾಡಿದ್ದಾರೆ. ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಸಹ ಜಾತಿ ಜನಗಣತಿ ವರದಿ ಜಾರಿಗೆ ಒತ್ತಡ ಹೇರುತ್ತಿದ್ದಾರೆ. ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಿಎಂ ಸಿದ್ದರಾಮಯ್ಯಗೆ ಇಕ್ಕಟ್ಟಿನಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲೇ ಜಾತಿ ಜನಗಣತಿ ಬಗ್ಗೆ ಘೋಷಣೆ ಮಾಡಿತ್ತು. ಈಗ ಸರ್ಕಾರದ ಕೈಯಲ್ಲಿ ವರದಿ ಇದ್ದು, ಅದನ್ನು ಮಂಡಿಸಿ, ಅಂಗೀಕರಿಸಬೇಕು. ಇನ್ನು ತಡ ಮಾಡುವುದು ಬೇಡ. ಜಾತಿ ಜನಗಣತಿ ವರದಿ ಬಗ್ಗೆ ಕಾಂಗ್ರೆಸ್ಸಿನ ಸಚಿವರು, ಶಾಸಕರೇ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಭರವಸೆ ನೀಡಿದಾಗ ಸುಮ್ಮನಿದ್ದು, ಈಗ ವರದಿ ಅನುಷ್ಠಾನ ವಿರೋಧಿಸಿ, ಸಭೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಈಡಿಗ ಸಮುದಾಯದಲ್ಲಿ ಕೇವಲ 15 ಲಕ್ಷ ಜನಸಂಖ್ಯೆ ಇದೆಯೆಂದು ವರದಿ ಹೇಳುತ್ತಿದೆ. ವಾಸ್ತವದಲ್ಲಿ ನಮ್ಮ ಸಮುದಾಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇದೆ. ಜಾತಿ ಮಾತ್ರವಲ್ಲ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಔದ್ಯೋಗಿಕ ಸಮೀಕ್ಷೆ ನಮ್ಮದಾಗಿರುತ್ತದೆ. ಈಗ ಜಾತಿ ಜನಗಣತಿ ವರದಿಗೆ ದೊಡ್ಡ ದೊಡ್ಡ ಸಮುದಾಯಗಳು, ಸಮುದಾಯಗಳ ನಾಯಕರು ವಿರೋಧಿಸುತ್ತಿದ್ದು, ವಿರೋಧ ಮಾಡಲಿ ಬಿಡಿ. ವರದಿಯಲ್ಲಿ ನೂನ್ಯತೆಗಳಿದ್ದರೆ ಅದರ ಬಗ್ಗೆ ಚರ್ಚಿಸೋಣ. ನಾವೂ ಮನೆ ಮನೆ ಸಮೀಕ್ಷೆ ಕೈಗೊಳ್ಳುತ್ತೇವೆ ಎಂದರು.

ಪರಿಶಿಷ್ಟರು, ಹಿಂದುಳಿದ ವರ್ಗಗಳಿಗೆ ಮಾತು ಕೊಟ್ಟೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕೊಟ್ಟ ಮಾತಿನಂತೆ ಜಾತಿ ಜನಗಣತಿ ವರದಿ ಮಂಡಿಸಿ, ಅಂಗೀಕರಿಸಬೇಕು. ಸಿಎಂ ಸಿದ್ದರಾಮಯ್ಯ ಒಂದುವೇಳೆ ಯಾವುದೇ ಒತ್ತಡಕ್ಕೆ ಮಣಿದು, ಜಾತಿ ಜನಗಣತಿ ಮಂಡನೆ ಕುರಿತ ಸಂಪುಟ ಸಭೆ ಕರೆಯದಿದ್ದರೆ ಅದು ಅನ್ಯಾಯ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಸಿಎಂ ಮಾಡಲು ಹುನ್ನಾರ ನಡೆದಿದೆ ಎಂದು ಅವರು ಟೀಕಿಸಿದರು.

ಮಹಾಮಂಡಳದ ಮುಖಂಡರಾದ ಆರ್.ಪ್ರತಾಪ್ ಮಟ್ಟಿಕಲ್ಲು, ಮಹಾಂತೇಶ, ತಿಪ್ಪೇಶ ಇದ್ದರು.

- - -

(ಬಾಕ್ಸ್‌) * ಹಿಂದುಳಿದ ಮಠಾಧೀಶರೊಂದಿಗೆ ಹೋರಾಟದ ಎಚ್ಚರಿಕೆ ಸುಮಾರು ₹150 ಕೋಟಿ ಖರ್ಚು ಮಾಡಿ, ಜಾತಿ ಜನಗಣತಿ ವರದಿ ಮಾಡಲಾಗಿದೆ. ವರದಿ ಸೋರಿಕೆ ಆಗಿದೆಯೆಂದು ಧರ್ಮಗಳನ್ನು ಎತ್ತಿಕಟ್ಟುವ ಕೆಲಸ ಆಗಬಾರದು. ಒಂದುವೇಳೆ ಏ.17ರಂದು ಕ್ಯಾಬಿನೆಟ್ ಸಭೆ ಕರೆದು, ಜಾತಿ ಜನಗಣತಿ ವರದಿ ಅಂಗೀಕರಿಸದಿದ್ದರೆ ರಾಜ್ಯದ ಹಿಂದುಳಿದ ಮಠಾಧೀಶರೆಲ್ಲಾ ಬೆಂಗಳೂರಿನಲ್ಲಿ ಸಭೆ ಮಾಡಿ, ಮುಂದಿನ ಹೋರಾಟದ ಬಗ್ಗೆ ಚರ್ಚಿಸಬೇಕಾದೀತು ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.

- - -

-15ಕೆಡಿವಿಜಿ6.ಜೆಪಿಜಿ:

ದಾವಣಗೆರೆಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳದ ಶ್ರೀ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article