ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಾಸಕ ಎಚ್.ಟಿ.ಮಂಜು ಎತ್ತಿನ ಗಾಡಿಯನ್ನು ಚಾಲನೆ ಮಾಡಿಕೊಂಡು ಬರುವ ಮೂಲಕ ಜಾನಪದ ಜಾತ್ರೆಗೆ ಮೆರಗು ನೀಡಿದರು. ಕಾಲೇಜು ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿನಿಯರೊಂದಿಗೆ ಮೆರವಣಿಗೆಯಲ್ಲಿ ನೃತ್ಯ ಮಾಡಿ ಸಂಭ್ರಮಿಸಿದರು.
ನಂತರ ಮಾತನಾಡಿದ ಶಾಸಕರು, ಸುಗ್ಗಿ ಸಂಭ್ರಮದಲ್ಲಿ ಹಾಡುವ ಹಾಡುಗಳು ಇಂದಿಗೂ ನಮ್ಮ ಬದುಕಿನ ಜೀವ ಸೆಲೆಯಾಗಿವೆ.ಮೌಢ್ಯವಿಲ್ಲದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಇನ್ಸ್ ಪೆಕ್ಟರ್ ಸುಮಾರಾಣಿ ಮಾತನಾಡಿ, ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿ. ಜಾನಪದದ ಮೂಲ ಬೇರೇ ಹೆಣ್ಣು. ಹೆಣ್ಣಿಗೂ ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ. ಹೆಣ್ಣು ಮಕ್ಕಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ಹಾಡುವ ಹಾಡುಗಳು ಹಾಗೂ ನೃತ್ಯಗಳು ಜಾನಪದ ಕ್ಷೇತ್ರದ ಶಕ್ತಿಯನ್ನು ಇಮ್ಮಡಿಗೊಳಿಸಿವೆ ಎಂದು ಹೇಳಿದರು.ಮಹಿಳಾ ಸರ್ಕಾರಿ ವಿದ್ಯಾಲಯದ ಪ್ರಾಂಶುಪಾಲೆ ಡಾ.ಕೆ.ಬಿ.ಪ್ರತಿಮಾ ಅಧ್ಯಕ್ಷತೆ ವಹಿಸಿ ಮಾತನಾಡಿ, ದನಕರುಗಳು ಹಾಗೂ ಪ್ರಕೃತಿಯೇ ಜನಪದರ ಜೀವಾಳ. ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಿ ಯುವ ಸಮುದಾಯವನ್ನು ಜಾಗೃತಿಗೊಳಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಗಿರೀಶ್, ಶಾಮಿಯಾನ ತಿಮ್ಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಪೋಷಕರು ಸೇರಿದಂತೆ ಸಹಾಯಕ ಪ್ರಾಧ್ಯಾಪಕ ಚೇತನ್ ಕುಮಾರ್ ಇದ್ದರು.