ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣವನ್ನು ಐತಿಹಾಸಿಕವಾಗಿ ನೋಡುವ ಮೂಲಕ ಸರ್ಕಾರಕ್ಕೆ ಆದಾಯ ಬರುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಇತಿಹಾಸ ಸಂಶೋಧಕ ತೈಲೂರು ವೆಂಕಟಕೃಷ್ಣ ಸಲಹೆ ನೀಡಿದರು.ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಗಣಂಗೂರು ನಂಜೇಗೌಡ ಅವರ ರಣಧೀರ ಕಂಠೀರವ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಮಾತನಾಡಿದರು.ಶ್ರೀರಂಗಪಟ್ಟಣದಂತಹ ಐತಿಹಾಸಿಕ ಪಟ್ಟಣಗಳನ್ನು ಉಳಿಸಿಕೊಂಡು ಇತಿಹಾಸ, ಪರಂಪರೆಯನ್ನು ಜಗತ್ತಿಗೆ ಪರಿಚಯಿಸಬೇಕಿದೆ. ಪುರಾತನ, ಐತಿಹಾಸಿಕ ದೇವಾಲಯಗಳಲ್ಲಿ ಕಂಡುಬರುವ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವುದು ನಮ್ಮೆಲರ ಜವಾಬ್ದಾರಿಯಾಗಬೇಕು ಎಂದು ನುಡಿದರು.ಬೃಹತ್ ಕಟ್ಟಡಗಳು ಮೇಲೇಳುತ್ತಿರುವುದರಿಂದ ಶ್ರೀರಂಗಪಟ್ಟಣದ ಕರಿಘಟ್ಟ, ಇಲ್ಲಿನ ಪುರಾಣ ಪ್ರಸಿದ್ಧ ದೇವಾಲಯಗಳ ಗೋಪುರಗಳು ಹಾಗೂ ಕಾವೇರಿ ನದಿ ಮರೆಯಾಗಿದೆ. ಹೀಗೆ ಮರೆಯಾಗುತ್ತಿರುವ ಶ್ರೀರಂಗಪಟ್ಟಣದ ಐತಿಹಾಸಿಕ ಸೊಬಗು ಮರೆಯಾಗದಂತೆ ಕಾಪಾಡಿಕೊಳ್ಳುವ ಕೆಲಸವಾಗಬೇಕು ಎಂದು ಹೇಳಿದರು. ಐತಿಹಾಸಿಕ ಪಟ್ಟಣಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು. ಮೈಸೂರು ಅರಸರಲ್ಲಿ ಸುಮಾರು ೨೦ ರಾಜರು ಪ್ರಮುಖವಾಗಿ ಕಾಣುತ್ತಾರೆ, ಏಕೆಂದರೆ, ಅವರೆಲ್ಲರೂ ಪ್ರಜೆಗಳ ಕಷ್ಟಗಳನ್ನು ಅರಿತಿದ್ದರು. ಮೈಸೂರು ಸಂಸ್ಥಾನವನ್ನು ಕಟ್ಟಿದ ರಾಜ ಒಡೆಯರ್, ನಂತರದಲ್ಲಿ ರಣಧೀರ ಕಂಠೀರವ, ದೇವರಾಜ ಒಡೆಯರ್, ಚಿಕ್ಕರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್ ಇವರ ಆಡಳಿತದ ನಂತರ ದಳವಾಯಿಗಳ ಪ್ರಾಬಲ್ಯ ಜಾಸ್ತಿಯಾಗಿ ಹೈದರ್, ಟಿಪ್ಪುಗಳ ಆಡಳಿತ ಪ್ರಾರಂಭವಾಯಿತು. ಕಡೆಯದಾಗಿ ಬಲಿಷ್ಠವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ಕಾಣಸಿಗುತ್ತಾರೆ ಎಂದರು.ಕಲೆ, ಸಾಹಿತ್ಯ, ನೃತ್ಯ ಹಾಗೂ ಸಂಗೀತಕ್ಕೆ ರಾಜ-ಮಹಾರಾಜರು ಆಶ್ರಯದಾತರಾಗಿದ್ದರು. ಮುಖ್ಯವಾಗಿ ಮೈಸೂರು ಅರಸರು ನೀರಾವರಿಗೆ ಕೊಟ್ಟಂತಹ ಕೊಡುಗೆ ಆಶ್ಚರ್ಯಕರವಾಗಿದೆ. ಬಂಗಾರದೊಡ್ಡಿ, ವಿರಿಜಾ, ಚಿಕ್ಕದೇವರಾಯ ಎಂಬ ಅವರದ್ದೇ ಶೈಲಿಯಲ್ಲಿ ನಾಲೆಗಳಿಗೆ ಹೆಸರುಗಳನ್ನಿಟ್ಟು ಕಟ್ಟಿದ ನಾಲೆಗಳನ್ನು ಉಳಿಸಿಕೊಳ್ಳುವಲ್ಲಿ ನಾವು ಸೋತಿದ್ದೇವೆ, ಇದರಲ್ಲಿ ಅಧಿಕಾರಿಗಳ ವೈಫಲ್ಯ ಹೆಚ್ಚು ಕಾಣುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.ಕೃತಿ ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಉರಿಗೌಡ, ನಂಜೇಗೌಡ ಎಂಬುವವರು ಟಿಪ್ಪು ಸುಲ್ತಾನ್ ಅವರನ್ನು ಕೊಂದರು ಎಂದು ಹೇಳುವ ಮೂಲಕ ಕೆಲವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ, ಇದು ಸುಳ್ಳು ಎಂಬುದನ್ನು ಅಂದೇ ಹೇಳಿದ್ದೆವು. ಈ ಕಾಲದಲ್ಲಿಯೂ ಸುಳ್ಳು ಚರಿತ್ರೆಗಳನ್ನು ಓದುವ ಕರ್ಮ ನಮ್ಮದಾಗಿದೆ. ವಚನ ದರ್ಶನ’ ಎಂಬ ಪುಸ್ತಕ ಹೊರತಂದು ಇಡೀ ಬಸವಣ್ಣ ಅವರ ಆಲೋಚನೆಗಳ ಕ್ರಮವನ್ನೇ ಒಡೆದು ಬಿಸಾಕಿದ್ದಾರೆ, ಇಂತಹ ಕುತಂತ್ರವನ್ನು ಕ್ಷಮಿಸಲು ಸಾಧ್ಯವೇ ಎಂದು ಬೇಸರ ವ್ಯಕ್ತಪಡಿಸಿದರು.ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಇದನ್ನೇ ಮುಂದಿಟ್ಟುಕೊಂಡು ಅಶಾಂತಿ ಉಂಟು ಮಾಡಲು ರಾಮಜಪ ಮತ್ತು ಶ್ರೀಆಂಜನೇಯನ ಹೆಸರೇಳಿಕೊಂಡು ಒಂದು ಪಕ್ಷದವರು ತಂತ್ರ ಮಾಡುತ್ತಿದ್ದಾರೆ, ಮಂಡ್ಯ ಜನ ಒರಟಾಗಿ ಕಂಡರೂ ಸಹ ಹೃದಯವಂತಿಕೆಯುಳ್ಳವರು ಹಾಗಾಗಿ ಇವರ ಮುಂದೆ ಜಾತಿ ಆಟ ನಡೆಯುವುದಿಲ್ಲ. ಮೈಸೂರಿನ ಮಾಜಿ ಸಂಸದರೊಬ್ಬರು ಮೈಸೂರಿನ ಹುಲಿ ಎಂಬ ಹೆಸರು ಕೊಟ್ಟವರು ಯಾರು ಎನ್ನುತ್ತಾರೆ, ಆದರೆ ಜನಪದ ಕವಿಗಳು ಮತ್ತು ಲಾವಣಿ ಜನರು ಹಾಡಿನಲ್ಲಿ ಬಿರುದು ಕೊಟ್ಟಿದ್ದಾರೆ, ಇವರು ಸುಳ್ಳು ಹೇಳುವ ಜನರಲ್ಲ, ಟಿಪ್ಪು ಕನ್ನಡಪರವಾಗಿದ್ದರು, ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು. ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಮಾತನಾಡಿದರು. ಪತ್ರಕರ್ತ ಗಣಂಗೂರು ನಂಜೇಗೌಡ ಅವರ ರಣಧೀರ ಕಂಠೀರವ’ ಕೃತಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಅಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕೃತಿ ಕರ್ತೃ ಗಣಗಂಗೂರು ನಂಜೇಗೌಡ ಭಾಗವಹಿಸಿದ್ದರು.