ಕನಕಗಿರಿಯ ಸಿದ್ಧಿವಿನಾಯಕ ಗಜಾನನ ಸಮಿತಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
ಎಂ. ಪ್ರಹ್ಲಾದ್ಕನ್ನಡಪ್ರಭ ವಾರ್ತೆ ಕನಕಗಿರಿ
ಅನ್ನದಾತನನ್ನೆ ಹೋಲುವ ಪರಿಸರಸ್ನೇಹಿ ಗಣಪತಿಯನ್ನು ಪ್ರತಿಷ್ಠಾಪಿಸುವ ಮೂಲಕ ಹೊಸ ತಂತ್ರಜ್ಞಾನ ಬಳಸಿ ಭತ್ತದ ಗದ್ದೆಯ ಸುತ್ತಲೂ ಹಳಿಯೊಂದನ್ನು ಅಳವಡಿಸಿ ವೀಕ್ಷಕರನೆಲ್ಲ ನೇಗಿಲಯೋಗಿ ವಿಘ್ನೇಶ್ವರನ ಜತೆ ಸುತ್ತುವ ಭಾಗ್ಯವನ್ನು ಕರುಣಿಸುವ ವ್ಯವಸ್ಥೆ ಮಾಡಲಾಗಿದೆ.ಕಳೆದ ೯ ವರ್ಷಗಳಿಂದ ಗಣೇಶೋತ್ಸವ ಸಂದರ್ಭದಲ್ಲಿ ವಿಭಿನ್ನ ಮಾದರಿಗಳ ಮೂಲಕ ಜನಮನ್ನಣೆ ಗಳಿಸಿರುವ ಪಟ್ಟಣದ ೧೩ನೇ ವಾರ್ಡಿನ ಸಿದ್ಧಿವಿನಾಯಕ ಗಜಾನನ ಸಮಿತಿಯು ಈ ಬಾರಿಯೂ ತಂತ್ರಜ್ಞಾನ ಉಪಯೋಗಿಸಿ ಗಣಪನ ಜತೆ ಭಕ್ತರನ್ನು ಸುತ್ತಿಸುವ ವ್ಯವಸ್ಥೆ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ಮಾದರಿಯಲ್ಲಿ ಮೂಡಿಬಂದ ವಿಡಿಯೋವನ್ನು ನೋಡಿದ ಯುವಕರು ಈ ವಿನೂತನ ಯೋಚನೆ ಹಾಕಿಕೊಂಡಿದ್ದಾರೆ. ಎರಡು ತಿಂಗಳ ಮುಂಚೆಯೇ ಕೆಲಸ ಕಾರ್ಯ ಆರಂಭಿಸಿರುವ ಸಮಿತಿಯ ಯುವಕರು ಸುಮಾರು ೨೦ ಅಡಿ ಸುತ್ತಲೂ ಹಳಿ ಅಳವಡಿಸುವುದು, ಕಬ್ಬಿಣದ ತುಂಡು ಜೋಡಿಸುವುದು, ಇದಕ್ಕೆ ಬೇಕಾದ ಮೋಟಾರ್ ಸಂಗ್ರಹಣೆ ಸೇರಿದಂತೆ ವಿಭಿನ್ನ ಆಯಾಮದಲ್ಲಿ ಯೋಚಿಸಿ, ವ್ಯವಸ್ಥಿತವಾಗಿ ಮಾಡಿರುವ ಪ್ಲಾನ್‌ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೂ ರಾಜ್ಯದ ಹೊಸ ಜಿಲ್ಲೆಯಾಗಿರುವ ಹೊಸಪೇಟೆ ನಗರದಿಂದ ಪರಿಸರಸ್ನೇಹಿ ಗಣಪತಿ ತರಲಾಗಿದ್ದು, ಎರಡೂವರೆ ಅಡಿ ಎತ್ತರದ ಎರಡೆತ್ತುಗಳು ಮೂರು ಅಡಿ ಎತ್ತರದ ನೇಗಿಲಯೋಗಿಯನ್ನು ಹೋಲುವ ವಿಘ್ನೇಶ್ವರ ಮೂರ್ತಿ ಮನ ಸೆಳೆಯುತ್ತಿವೆ. ಇವುಗಳ ಜತೆ ಗಣಪತಿಯ ಅಕ್ಕಪಕ್ಕದಲ್ಲಿ ನಿಂತು ರೈಲುಮಾರ್ಗದಲ್ಲಿ ಸಾಗುವ ಕ್ಷಣವನ್ನು ವೀಕ್ಷಿಸುವುದಕ್ಕೆ ನೂರಾರು ಜನ ಆಗಮಿಸುತ್ತಿದ್ದಾರೆ.ಭತ್ತದ ಗದ್ದೆಯ ಸುತ್ತ ರೈಲುಮಾರ್ಗದೊಟ್ಟಿಗೆ ಅಳವಡಿಸಿರುವ ಎತ್ತು, ಗಣಪತಿಯ ಸಾಗಲು ಸಮಿತಿಯೂ ₹೨೦ ಟಿಕೆಟ್ ಮಾಡಿದ್ದು, ಇಚ್ಛೆಯುಳ್ಳ ಭಕ್ತರು, ಚಿಕ್ಕಮಕ್ಕಳು ಟಿಕೆಟ್ ಪಡೆದು ನೇಗಿಲಯೋಗಿ ಗಣಪತಿಯೊಂದಿಗೆ ಸುತ್ತಾಡಿ ಸಂಭ್ರಮಿಸುತ್ತಿದ್ದಾರೆ. ಹೀಗೆ ಸುತ್ತಾಟದ ಸಮಯದಲ್ಲಿ ವಿಡಿಯೋ, ಪೋಟೋ ಕ್ಲಿಕ್ಕಿಸಿಕೊಂಡು ಖುಷಿಯನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.ಹಳ್ಳಿಹಳ್ಳಿಗೂ ಫೇಮಸ್!:
ತಾಲೂಕು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಜನತೆ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಗಣಪತಿ ಹಬ್ಬದ ಸಂಭ್ರಮದಲ್ಲಿರುವ ಯುವ ರೈತರು ಇಲ್ಲಿಯ ಹೊಸತನ ನೋಡಲು ಬರುತ್ತಿದ್ದಾರೆ. ಸ್ಥಳೀಯರು ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಈ ವಿಭಿನ್ನ ಪ್ರಯತ್ನದ ವಿಡಿಯೋ ವೈರಲ್ ಆಗಿದ್ದರಿಂದ ಹಳ್ಳಿ ಜನ ಪಟ್ಟಣದತ್ತ ಮುಖ ಮಾಡಿರುವುದು ಸುಳ್ಳಲ್ಲ.ಗಣೇಶೋತ್ಸವ ಪ್ರಯುಕ್ತ ಓಣಿಯ ಯುವಕರು ಹೊಸ ಪ್ರಯೋಗ ಮಾಡಿದ್ದಾರೆ. ಕಳೆದ ೯ ವರ್ಷಗಳ ವಿನೂತನ ಪ್ರಯತ್ನಕ್ಕಿಂತ ಈ ವರ್ಷದ ಭತ್ತದ ಗದ್ದೆಯ ಸುತ್ತ ರೈಲುಮಾರ್ಗದಲ್ಲಿ ಸಾಗಲು ತಂತ್ರಜ್ಞಾನದಿಂದ ಮಾಡಿದ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಬಂದಿದೆ. ಈ ಥೀಮ್ ರೈತರಿಗೆ ಸಂಬಂಧಿಸಿದ್ದಾಗಿದ್ದರಿಂದ ಹೆಚ್ಚಾಗಿ ರೈತರು ಇಲ್ಲಿಗೆ ಬಂದು ವೀಕ್ಷಣೆ ಮಾಡುತ್ತಿದ್ದಾರೆ ಎಂದು
ಸಮಿತಿಯ ಮುಖ್ಯಸ್ಥ ವಿಜಯಕುಮಾರ ತಿಳಿಸಿದ್ದಾರೆ.