ಜೀವಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ-ಶಾಸಕ ಮಾನೆ

KannadaprabhaNewsNetwork |  
Published : May 18, 2026, 03:45 AM IST
ಹುಣಸಿಕಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೂಳೆತ್ತಲಾದ ಚುಂಚಲಕಟ್ಟಿ ಕೆರೆಯನ್ನು ಶಾಸಕ ಶ್ರೀನಿವಾಸ ಮಾನೆ ಸಮುದಾಯಕ್ಕೆ ಹಸ್ತಾಂತರಿಸಿದರು. | Kannada Prabha

ಸಾರಾಂಶ

ನೀರಿಲ್ಲದ ಬದುಕನ್ನು ಊಹಿಸುವುದೂ ಸಹ ಅಸಾಧ್ಯ. ಹಾಗಾಗಿ ಜೀವಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ. ಮುಂದಿನ ಜನಾಂಗಕ್ಕೆ ನೀರನ್ನು ಉಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ನೀರಿಲ್ಲದ ಬದುಕನ್ನು ಊಹಿಸುವುದೂ ಸಹ ಅಸಾಧ್ಯ. ಹಾಗಾಗಿ ಜೀವಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ. ಮುಂದಿನ ಜನಾಂಗಕ್ಕೆ ನೀರನ್ನು ಉಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ₹೨೦ ಲಕ್ಷ ವೆಚ್ಚದಲ್ಲಿ ಹೂಳೆತ್ತಲಾದ ಚುಂಚಲಕಟ್ಟಿ ಕೆರೆಯನ್ನು ಶುಕ್ರವಾರ ಸಮುದಾಯಕ್ಕೆ ಹಸ್ತಾಂತರಿಸಿ ಅವರು ಮಾತನಾಡಿದರು.

ಕಾಲ ಬದಲಾದಂತೆ ಕೆರೆ-ಕಟ್ಟೆಗಳನ್ನು ಮುಚ್ಚಲಾಗುತ್ತಿದೆ. ಕಾಲುವೆಗಳನ್ನು ಅತಿಕ್ರಮಿಸಿ ನೀರು ಸರಾಗವಾಗಿ ಹರಿದು ಜಲಮೂಲ ಸೇರುವುದನ್ನು ತಡೆಯಲಾಗಿದೆ. ನೀರಿನ ಅಪವ್ಯಯವೂ ಹೆಚ್ಚುತ್ತಿದೆ. ಇವೆಲ್ಲ ಕಾರಣಗಳಿಂದ ಸಂಕಷ್ಟ ತಲೆದೋರಿದೆ. ಸಮಸ್ಯೆ ಸೃಷ್ಟಿಯಾದ ಸಂದರ್ಭದಲ್ಲಿ ವ್ಯಥೆ ಪಡೆಯುವ ಬದಲಿಗೆ ನೀರಿನ ವಿಷಯದಲ್ಲಿ ಸಮಸ್ಯೆ ಸೃಷ್ಟಿಯಾಗದಂತೆ ಜಾಗರೂಕತೆ ವಹಿಸಬೇಕಿದೆ ಎಂದು ಹೇಳಿದರು.

ಸಮಾಜದ ಎಲ್ಲ ವರ್ಗದ ಜನರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಮಹತ್ವದ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತೊಡಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕಾಳಜಿ ವಹಿಸಿದ್ದು, ಹತ್ತು, ಹಲವು ಸಮಾಜೋಪಯೋಗಿ ಸೇವಾ ಕಾರ್ಯಗಳ ಮೂಲಕ ಮಾದರಿಯಾಗಿದೆ ಎಂದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಕಳೆದ ೧೫, ೧೬ ವರ್ಷಗಳ ಹಿಂದೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಜಾರಿಗೆ ಬಂದಿದ್ದು, ರಾಜ್ಯವ್ಯಾಪಿ ಇದುವರೆಗೆ ೯೯೭ ಕೆರೆಗಳನ್ನು ಹೂಳೆತ್ತಿ ಜೀರ್ಣೋದ್ಧಾರಗೊಳಿಸಲಾಗಿದೆ. ಈ ಪೈಕಿ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಒಟ್ಟು ೪೮ ಕೆರೆಗಳನ್ನು ಸಂರಕ್ಷಿಸಲಾಗಿದೆ. ಸಣ್ಣ ಉಳಿತಾಯದಿಂದ ದೊಡ್ಡ ಬದಲಾವಣೆ ಸಾಧ್ಯ ಎನ್ನುವುದನ್ನು ನಿರೂಪಿಸಿರುವ ಯೋಜನೆ ಸಂಕಷ್ಟದ ಸಮಯದಲ್ಲಿ ಬಡ ಮತ್ತು ದುರ್ಬಲ ಕುಟುಂಬಗಳಿಗೆ ನೆರವಾಗುವ ಮಾನವೀಯ ಕಾರ್ಯದಲ್ಲಿ ತೊಡಗಿದೆ. ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆಗಲಿದೆ ಎನ್ನುವ ಸಂದೇಶ ಸಾರಿದೆ ಎಂದರು.

ಯೋಜನೆಯ ಯೋಜನಾಧಿಕಾರಿ ರಘುರಾಮ್ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ವಾಸುದೇವ ಮೂಡಿ, ನಾರಾಯಣ ಬಿ., ಪಿಡಿಒ ರಾಮಣ್ಣ ಹನಕನಹಳ್ಳಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ ಕುಲಕರ್ಣಿ, ಸದಸ್ಯ ಗಂಗಾಧರ ಪ್ಯಾಟಿ, ಸಿದ್ದಲಿಂಗಪ್ಪ ಕಮಡೊಳ್ಳಿ, ರಾಮು ಯಳ್ಳೂರ, ರವಿ ಮ್ಯಾಗೇರಿ, ಕೆ.ಎಸ್. ಕೋರಿಶೆಟ್ಟರ, ನಿಂಗರಾಜ ಮಾಳವಾಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಂಚದ ಹಣ ವಶಪಡಿಸಿಕೊಂಡಿಲ್ಲದಕಾರಣಕ್ಕೆ ತನಿಖೆ ರದ್ದಾಗದು: ಕೋರ್ಟ್‌
ಜಂಟಿ ಸರ್ವೆ ಬಳಿಕ ಸಮರೋಪಾದಿಯಲ್ಲಿ ಹಕ್ಕುಪತ್ರ ವಿತರಣೆ: ಶಾಸಕ ಟಿ.ಡಿ.ರಾಜೇಗೌಡ