ಎಲ್ಲ ಇಲ್ಲಗಳ ನಡುವೆ ಏನೆಲ್ಲವಾದವಳು ತಿಮ್ಮಕ್ಕ

KannadaprabhaNewsNetwork |  
Published : Dec 03, 2025, 01:04 AM IST
45 | Kannada Prabha

ಸಾರಾಂಶ

ತಾನುಂಡಳೋ ಬಿಟ್ಟಳೋ, ತನ್ನ ಮತ್ತು ದನಗಾಹಿ ಗಂಡನ ಕೂಲಿ ಹಣದಲ್ಲಿ ಸಾಲು ಮರಗಳಿಗೆ ಮಾತ್ರ ಮಾತೃವಾಗಿ ನೀರುಣಿಸಿ ಸಾಕಿ ಸಲುಹಿ, ತಾನು ಬಂಜೆಯಲ್ಲ ಮರಗಳ ಮಹಾತಾಯಿ ಎಂಬುದನ್ನು ನಿರೂಪಿಸಿ

ಕನ್ನಡಪ್ರಭ ವಾರ್ತೆ ಮೈಸೂರುಎಲ್ಲ ಇಲ್ಲಗಳ ನಡುವೆ ಏನೆಲ್ಲವೂ ಆಗಿಹೋದ ಮರಗಳ ಮಹಾತಾಯಿ ತಿಮ್ಮಕ್ಕ ಇದಕ್ಕೆ ಸರಿಯಾದ ರೂಪಕ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ, ಕವಿ ಜಯಪ್ಪ ಹೊನ್ನಾಳಿ ಹೇಳಿದರು.ನನ್ನವ್ವ ಸಾಂಸ್ಕೃತಿಕ ಕಲಾತಂಡ ಮೈಸೂರು ನಗರದ ನಮನ ಕಲಾ ಮಂಟಪದಲ್ಲಿ ಏರ್ಪಡಿಸಿದ್ದ, ಸಾಲುಮರದ ತಿಮ್ಮಕ್ಕ ರಾಜ್ಯಮಟ್ಟದ ಕವಿಗೋಷ್ಠಿ ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾನುಂಡಳೋ ಬಿಟ್ಟಳೋ, ತನ್ನ ಮತ್ತು ದನಗಾಹಿ ಗಂಡನ ಕೂಲಿ ಹಣದಲ್ಲಿ ಸಾಲು ಮರಗಳಿಗೆ ಮಾತ್ರ ಮಾತೃವಾಗಿ ನೀರುಣಿಸಿ ಸಾಕಿ ಸಲುಹಿ, ತಾನು ಬಂಜೆಯಲ್ಲ ಮರಗಳ ಮಹಾತಾಯಿ ಎಂಬುದನ್ನು ನಿರೂಪಿಸಿ, ಬೆಳೆದ ಮರಗಳಲ್ಲಾಡುವ ಮಂಗ, ಅಳಿಲು, ತೂಗುವ ಜೇನುಗೂಡು, ಹಾಡುವ ಹಕ್ಕಿಗಳ ಗೂಡು ಮೊದಲಾದವುಗಳಲ್ಲಿ ತನ್ನ ಸಂತಾನದ ಸುಖವನ್ನು ಕಂಡು, ಮರಗಳ ಮೂಲಕವೇ ಅಮರಳಾಗಿ, ವೃಕ್ಷಮಾತೆಯೆನಿಸಿ, ಪದ್ಮಶ್ರೀ ಪುರಸ್ಕೃತಳಾಗಿ, ತಾನು ನಿರಕ್ಷರಕುಕ್ಷಿಯಾಗಿದ್ದರೂ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ನಾಡೋಜ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಪ್ರಶಸ್ತಿಗಳ ಪಡೆದು, ಕರ್ನಾಟಕದ ಕಲ್ಪವಲ್ಲಿಯೆನಿಸಿ, ವನಮಾತೆಯಾಗಿ, ವಿಶ್ವಾತ್ಮಳೆನಿಸಿ, ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ, ಇಂದಿರಾ ಪ್ರಿಯದರ್ಶಿನಿ, ವೀರಚಕ್ರ, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿಗಳೂ ಮೊದಲ್ಗೊಂಡು, ಅನೇಕಾನೇಕ ರಾಜ್ಯಮಟ್ಟದ, ರಾಷ್ಟ್ರಮಟ್ಟದ, ಅಂತರರಾಷ್ಟ್ರೀಯ ಮಟ್ಟದ ಗೌರವ ಪ್ರಶಸ್ತಿಗಳಿಗೂ ಸನ್ಮಾನಗಳಿಗೂ ಅಭಿವಂದನೆಗಳಿಗೂ ಪಾತ್ರಳಾಗಿ, ಬಿಬಿಸಿಯ 100 ಪ್ರಭಾವಿ ಹಾಗೂ ಸ್ಫೂರ್ತಿದಾಯಕ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದು, ಗುಣಗ್ರಾಹಿಗಳಾದ ಅಮೆರಿಕದವರು ತಮ್ಮ ಪರಿಸರ ಶಿಕ್ಷಣ ಸಂಸ್ಥೆಗೆ ತಿಮ್ಮಕ್ಕನವರ ನಾಮಕರಣ ಮಾಡುವ ಮಟ್ಟಕ್ಕೆ ಬೆಳೆದುನಿಂತದ್ದು ನಿಜಕ್ಕೂ ಪವಾಡವೇ ಸರಿ, ಶೂನ್ಯದಿಂದ ಹೊರಟು ಸಿಂಹಾಸನವೇರುವುದೆಂದರೆ ಇದೇ ಆಗಿದೆ ಎಂದರು.114 ವರ್ಷಗಳ ಅವರ ಸುದೀರ್ಘ ಸಂತೃಪ್ತ ಜೀವನಕ್ಕೆ ಕಾರಣ ಅವರಲ್ಲಿದ್ದ ಆರೋಗ್ಯಕರವಾದ ಮೌಲಿಕ ವಿಚಾರಗಳೇ ಆಗಿದ್ದು, ಮರ ದೇವರ ವರ ಎಂಬುದನ್ನೂ, ಕಾಡಿದ್ದರೆ ನಾಡೆಂಬುದನ್ನೂ, ಕಾಡು ದೇವರ ಬೀಡೆಂಬುದನ್ನೂ ಆಕೆ ಅರಿತಿದ್ದರಿಂದಲೇ ರಸ್ತೆ ಬದಿಗೆ ನಾಲ್ಕೂವರೆ ಕಿ.ಮೀ. ದೂರದವರೆಗೆ ನೀರು ಹೊತ್ತು, 385 ಮರಗಳನ್ನು ರಸ್ತೆ ಬದಿಯಲ್ಲಿ ಬೆಳೆಸಿ, ಒಟ್ಟಾರೆಯಾಗಿ 8000 ಕ್ಕೂ ಹೆಚ್ಚು ಮರಗಳಿಗೆ ಜನ್ಮನೀಡಿ, ಮರಗಳ ಅಮರ ಮಾತೆಯಾದರು, ತಮ್ಮ ಕೂಲಿ ಹಣದಲ್ಲಿ ಬೆಂಗಾಡ ಮರಗಳನಾಡು ಮಾಡಿ, ಪ್ರಕೃತಿಯಲ್ಲೇ ಪರಮಾತ್ಮನ ಕಂಡು ಕಾಣಿಸಿದ ಆ ಮಹಾ ಮಾತೆ ಕನ್ನಡಿಗರಿಗಷ್ಟೇ ಅಲ್ಲ, ಪರಿಸರ ಪ್ರೇಮಿಗಳಿಗೆಲ್ಲ ತಮ್ಮೀ ಸಾಧನೆಯಿಂದಾಗಿಯೇ ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು.ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಸಮಾರಂಭ ಉದ್ಘಾಟಿಸಿದರು.ಮೈಸೂರು ಆಕಾಶವಾಣಿಯ ನಿವೃತ್ತ ಅಧಿಕಾರಿ ಎನ್.ವಿ. ರಮೇಶ್, ನನ್ನವ್ವ ಮಹದೇವ್, ಪ್ರಭಾಶಾಸ್ತ್ರಿ ಜೋಶ್ಯುಲ ಮೈಸೂರು ಇದ್ದರು.ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಅತ್ಯುತ್ತಮ ಕವಿತೆಗಳನ್ನು ವಾಚಿಸಿದ ಆರು ಜನ ಕವಿಗಳಿಗೆ, ಪ್ರಥಮ ಬಹುಮಾನ ಎರಡು ಸಾವಿರ ರು, ದ್ವಿತೀಯ ಬಹುಮಾನ ಒಂದು ಸಾವಿರ ರು, ತೃತೀಯ ಬಹುಮಾನ ಐನೂರು ರು. ಗಳನ್ನು ನನ್ನವ್ವ ಮಹದೇವ್ ನೀಡಿ ಗೌರವಿಸಿ, ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಗಾಗಿ ಆಗ್ರಹಿಸಿ ಗೋಕಾಕ ಬಂದ್‌ ಇಂದು
ಒಂದೇ ಸಂಸ್ಥೆಯಿಂದ 50 ಜನ ಅಗ್ನಿವೀರರಾಗಿ ಆಯ್ಕೆ